ವೀರಾಜಪೇಟೆ, ಜ.17: ಮೂರು ವರ್ಷದ ಹಿಂದೆ ವೀರಾಜಪೇಟೆ ಸುಣ್ಣದ ಬೀದಿಯ ಸಾಯಿರಾಬಾನು (32) ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿ ಆಕೆಗೆ ಕೊಲೆ ಬೆದರಿಕೆಯೊಡ್ಡಿ, ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ದೊರೆತ ದೂರಿನನ್ವಯ ಸುಂಟಿಕೊಪ್ಪದ ಮಕ್ಮಬೂಲ್ ಎಂಬವರ ಮಗ ಶಾಹಿದ್ ಸೇರಿದಂತೆ ವೀರಾಜಪೇಟೆ ನಗರ ಪೊಲೀಸರು ಆರು ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಕಳೆದ ಸುಮಾರು ಹತ್ತು ವರ್ಷಗಳಿಂದ ಸಾಹಿರಾಬಾನುವನ್ನು ಶಾಹಿದ್ ಪ್ರೀತಿಸುತ್ತಿದ್ದು ಎರಡು ಕಡೆಯವರ ಪೋಷಕರ ಸಮ್ಮತಿ ಮೇರೆ ತಾ. 11-6-2015ರಂದು ಮುಸ್ಲಿಂ ಸಂಪ್ರದಾಯದಂತೆ ವೀರಾಜಪೇಟೆಯ ಮಸೀದಿಯಲ್ಲಿ ಮದುವೆ ಮಾಡಲಾಗಿತ್ತು. ದಂಪತಿ ಮೂರು ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಮದುವೆ ಸಮಯದಲ್ಲಿ ಸಾಯಿರಾಬಾನುವಿನ ಪೋಷಕರು ರೂ. 5ಲಕ್ಷ ನಗದು, ಸುಮಾರು ಒಂದೂವರೆ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ನೀಡಿದ್ದರು. ಶಾಹಿದ್ ತಾನು ಸುಂಟಿಕೊಪ್ಪದಲ್ಲಿ ಮರ ವ್ಯಾಪಾರಿ ಎಂದು ಹೇಳಿಕೊಂಡು ವಿವಾಹವಾಗಿದ್ದಲ್ಲದೆ ಹಣಕ್ಕೂ ಆಗಿಂದಾಗ್ಗೆ ಪೀಡಿಸುತ್ತಿದ್ದನೆಂದು ಪುಕಾರಿನಲ್ಲಿ ತಿಳಿಸಲಾಗಿದೆ.

ತಾ. 14-8-2018ರಂದು ಶಾಹಿದ್ ಕುಟುಂಬದ ಮೂರು ಮಂದಿ ವೀರಾಜಪೇಟೆಗೆ ಬಂದು ಸಾಯಿರಾಬಾನುವಿನ ಮನೆಗೆ ಅಕ್ರಮ ಪ್ರವೇಶ ಮಾಡಿ ಗಂಡ ಶಾಹಿದ್‍ನನ್ನು ದಾಂಪತ್ಯದಿಂದ ಬಿಟ್ಟು ಬಿಡುವಂತೆ ಒತ್ತಾಯಿಸಿ ಆಕೆಯ ಮೇಲೆ ಚೂರಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಗಂಭೀರ ಸ್ವರೂಪ ಗಾಯ ಉಂಟು ಮಾಡಿದ್ದು ತಾನು ಚಿಕಿತ್ಸೆಗಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಗಂಡ ಶಾಹಿದ್ ಸೇರಿದಂತೆ ದೂರವಾಣಿ ಮೂಲಕ ಈ ಆರು ಮಂದಿ ಜೀವ ಭಯದ ಬೆದರಿಕೆ ಹಾಕುತ್ತಿದ್ದುದಲ್ಲದೆ ತಾ.20-10-2018ರಂದು ಮನೆಯಲ್ಲಿ ಅವಲಕ್ಕಿ ಪ್ರಸಾದಕ್ಕೆ ವಿಷ ಹಾಕಿ ಆಕೆ ಅಸ್ವಸ್ಥಗೊಂಡಿರುವ ಕುರಿತು ದೂರಿನಲ್ಲಿ ತಿಳಿಸಲಾಗಿದೆ.

ವೀರಾಜಪೇಟೆ ನಗರ ಪೊಲೀಸರು ಸಾಯಿರಾಬಾನು ನೀಡಿದ ಪುಕಾರಿನ ಮೇರೆ ಗಂಡ ಶಾಹಿದ್, ಕುಟುಂಬದ ಸುಂಟಿಕೊಪ್ಪದ ಸಾಜೀರಾ,ಆಸ್ಮಾ, ಸಲೀಂ, ರೆಷ್ಮಾ, ನಜೀರ್ ಎಂಬ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು ಆರೋಪಿಗಳ ಶೋಧನೆಯಲ್ಲಿ ತೊಡಗಿದ್ದಾರೆ.