ಸೋಮವಾರಪೇಟೆ,ಜ.17: ಪ್ರಸಕ್ತ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಸಂತ್ರಸ್ತರಾಗಿರುವ ಮಂದಿಗೆ ಇಂದಿಗೂ ಸಮರ್ಪಕವಾಗಿ ಪರಿಹಾರ ಲಭ್ಯವಾಗಿಲ್ಲ. ಕೇವಲ ಪ್ರಚಾರಕ್ಕೆ ಮಾತ್ರ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯರುಗಳು ಆರೋಪಿಸಿದ್ದು, ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಗಂಟೆ ಕಾಲ ಚರ್ಚೆಯಾಯಿತು. ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆಯಿತು.
ಪ್ರವಾಹ, ಭೂಕುಸಿತದಿಂದ ಕೃಷಿಕರ ಕೃಷಿ ಭೂಮಿ, ಬೆಳೆ ನಷ್ಟ ಸೇರಿದಂತೆ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಇಲ್ಲಿಯವರೆಗೆ ಸರ್ಕಾರದ ಯಾವದೇ ಪರಿಹಾರ ನೀಡಿಲ್ಲ. ಪ್ರಚಾರಕ್ಕೆ ಮಾತ್ರ ಹೇಳಿಕೆಗಳನ್ನು ನೀಡಲಾಗುತ್ತಿದೆ. ಕೃಷಿ ನಷ್ಟದ ಬಗ್ಗೆ ಇಲ್ಲಿಯವರೆಗೂ ಸಂಪೂರ್ಣ ಸರ್ವೆ ನಡೆಸಿಲ್ಲ ಎಂದು ಸದಸ್ಯರುಗಳು, ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು. ನಷ್ಟಕ್ಕೊಳಗಾದ ರೈತರಿಗೆ ಕೂಡಲೇ ಸೂಕ್ತ ಪರಿಹಾರವನ್ನು ಸರ್ಕಾರದ ವತಿಯಿಂದ ನೀಡಬೇಕೆಂದು ತಹಶೀಲ್ದಾರ್ ಪಿ.ಎಸ್. ಮಹೇಶ್ ಅವರನ್ನು ಸದಸ್ಯರುಗಳು ಒತ್ತಾಯಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ತಹಶೀಲ್ದಾರ್, ಈಗಾಗಲೇ ಬೆಳೆ ನಷ್ಟದ ಬಗ್ಗೆ ಸರ್ವೆ ಕಾರ್ಯ ನಡೆಸುತ್ತಿದ್ದು, ಎರಡು ಜೀವ ಹಾನಿಗೆ ರೂ. 10 ಲಕ್ಷ ಪರಿಹಾರ ಹಾಗೂ ಒಟ್ಟು 43 ಜಾನುವಾರುಗಳ ಜೀವ ಹಾನಿಗೆ ಪರಿಹಾರ ನೀಡಲಾಗಿದೆ. ಕೃಷಿ ಇಲಾಖೆಯಿಂದ 11,206, ತೋಟಗಾರಿಕಾ ಇಲಾಖೆಯಿಂದ 7,927 ಹಾಗೂ ಕಾಫಿ ಮಂಡಳಿಯಿಂದ 12,142 ಅರ್ಜಿಗಳು ಪರಿಹಾರಕ್ಕಾಗಿ ಸಲ್ಲಿಕೆಯಾಗಿದ್ದು, ಸರ್ಕಾರದ ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ನೇರವಾಗಿ ಪರಿಹಾರದ ಹಣವನ್ನು ತುಂಬಲಾಗುವದು ಎಂದರು.
ಮಳೆಯಿಂದ ನದಿ ತೋಡುಗಳಲ್ಲಿ ಹೂಳು ತುಂಬಿದ್ದು, ಇಲ್ಲಿಯವರೆಗೂ ಹೂಳು ತೆಗೆಸುವ ಕಾರ್ಯವಾಗಿಲ್ಲ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು ಮುಂದಾಗಿಲ್ಲ. ಕೇವಲ ಪ್ರಚಾರಕ್ಕಾಗಿ ಮಾತ್ರ ಭೂಮಿ ಪೂಜೆ ಮಾಡಲಾಗಿದೆ. ಮುಂದಿನ ನಾಲ್ಕೈದು ತಿಂಗಳಿನಲ್ಲಿ ಮಳೆಗಾಲ ಪ್ರಾರಂಭಗೊಳ್ಳಲಿದೆ. ನದಿ ತೋಡುಗಳಲ್ಲಿ ತುಂಬಿರುವ ಹೂಳನ್ನು ಎರಡು ತಿಂಗಳಿನಲ್ಲಿ ತೆಗೆಯುವ ಕಾರ್ಯ ಮತ್ತು ಮನೆ ಕಳೆದುಕೊಂಡ ನಿರಾಶ್ರಿತರಿಗೆ ತಕ್ಷಣ ಮನೆ ನಿರ್ಮಿಸಿಕೊಡುವಂತೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಒತ್ತಾಯಿಸಿದರು.
ತಾಲೂಕಿನ ಮಾದಾಪುರ ಗ್ರಾ. ಪಂ. ವ್ಯಾಪ್ತಿಯ ಜಂಬೂರಿನಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿದ ಈ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷರು ಹಾಗೂ ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆರೋಪಿಸಿದರು.
ಜಿಲ್ಲಾ ಮಟ್ಟದಿಂದಲೇ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಂದಿನ ಕಾರ್ಯಕ್ರಮಗಳಲ್ಲಿ ಹೀಗಾಗದಂತೆ ಎಚ್ಚರ ವಹಿಸಲಾಗುವದು ಎಂದು ತಹಶೀಲ್ದಾರ್ ಮಹೇಶ್ ತಿಳಿಸಿದರು. ತಾಲೂಕಿನ ಹಲವು ಕಾಫಿ ಬೆಳೆಗಾರರು ಮತ್ತು ಸ್ಥಿತಿವಂತರಿಗೆ ಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ್ ನೀಡುವ ಮೂಲಕ ಸರ್ಕಾರದ ಯೋಜನೆಗಳು ಉಳ್ಳವರ ಪಾಲಾಗುವಂತೆ ಮಾಡಿದ್ದಾರೆ. ಬಡವರ ಯೋಜನೆಗಳನ್ನು ಬಡವರಿಗೆ ನೀಡಬೇಕೆಂದು ಸದಸ್ಯ ಬಿ.ಬಿ. ಸತೀಶ್ ಸಭೆಯ ಗಮನಕ್ಕೆ ತಂದರು.
ಸ್ಮಶಾನ, ತ್ಯಾಜ್ಯ ವಿಲೇವಾರಿ ಸಮಸ್ಯೆಗಳು ಪ್ರತಿ ಸಭೆಯಲ್ಲಿ ಚರ್ಚೆಗೆ ಬರುತ್ತಿದ್ದರೂ, ಇಂದಿಗೂ ಯಾವದೇ ಪರಿಹಾರ ಕಂಡಿಲ್ಲ. ಸರ್ಕಾರಿ ಸ್ಥಳ ಗುರುತಿಸಿಕೊಡಲು ಕಂದಾಯ ಇಲಾಖೆ ವಿಫಲವಾಗಿದೆ. ಕೂಡಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಿ ಗ್ರಾಮ ಪಂಚಾಯಿತಿ ಅಧೀನಕ್ಕೆ ನೀಡಬೇಕೆಂದು ಉಪಾಧ್ಯಕ್ಷ ಅಭಿಮನ್ಯುಕುಮಾರ್, ತಹಶೀಲ್ದಾರರಿಗೆ ಸೂಚಿಸಿದರು. ತಾಲೂಕು ಆರೋಗ್ಯಾಧಿಕಾರಿ ಚೇತನ್ ಮಾತನಾಡಿ, 2018ರಲ್ಲಿ ಒಟ್ಟು 18 ನಾಯಿ ಕಡಿತದ ಪ್ರಕರಣಗಳು ನಡೆದಿದ್ದು, ರೇಬಿಸ್ ಕಾಯಿಲೆಗೆ ಇಲಾಖೆಯಲ್ಲಿ ಸಾಕಷ್ಟು ಔಷಧಿ ಇದೆ ಎಂದು ಸಭೆಗೆ ತಿಳಿಸಿದರು.
ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಕೆ. ನಾಗರಾಜು ಮಾತನಾಡಿ, ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಲು ರೂ.800ರವರೆಗೆ ಖರ್ಚಾಗಲಿದ್ದು, ಇಲಾಖೆಯಲ್ಲಿ ಅಷ್ಟು ಹಣವಿಲ್ಲ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ಹಣ ಭರಿಸಿದಲ್ಲಿ ಇಲಾಖೆ ಚಿಕಿತ್ಸೆಗೆ ಮುಂದಾಗಲಿದೆ ಎಂದರು.
ಉಳಿದಂತೆ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಚ್.ಎನ್. ತಂಗಮ್ಮ, ಕಾರ್ಯ ನಿರ್ವಹಣಾಧಿಕಾರಿ ಬಿನಯ್, ತಾಲೂಕು ಪಂಚಾಯಿತಿ ಸದಸ್ಯರು, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಸ್ಥಿತರಿದ್ದರು.