ಗೋಣಿಕೊಪ್ಪ ವರದಿ, ಜ. 17 : ಸಂವಹನ ಕೌಶಲ್ಯದ ಮೂಲಕ ದೇಶದ ಪ್ರಗತಿಗೆ ಶ್ರಮಿಸಲು ಯುವ ಸಮೂಹ ಮುಂದಾಗಬೇಕಿದೆ ಎಂದು ಕಾವೇರಿ ಎಜುಕೇಷನಲ್ ಸೊಸೈಟಿ ಕಾರ್ಯದರ್ಶಿ ಕೆ. ಜಿ. ಉತ್ತಪ್ಪ ಸಲಹೆ ನೀಡಿದರು.

ಇಲ್ಲಿನ ಕಾವೇರಿ ಕಾಲೇಜು ಸಭಾಂಗಣದಲ್ಲಿ ನ್ಯಾಷನಲ್ ಸರ್ವಿಸ್ ಸ್ಕೀಂ ಹಾಗೂ ನೆಹರು ಯುವ ಕೇಂದ್ರ ಸಹಯೋಗದಲ್ಲಿ 3 ದಿನಗಳ ಕಾಲ ನಡೆಯುವ ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನ ಮುಟ್ಟುವ ಮಾತಿನ ಮೂಲಕ ಉತ್ತಮ ಸಮಾಜ ಕಟ್ಟುವ ಯುವ ಸಮೂಹ ದೇಶಕ್ಕೆ ಅವಶ್ಯಕತೆ ಇದೆ. ಇದಕ್ಕಾಗಿ ವಿದ್ಯಾರ್ಥಿ ಜೀವನದಲ್ಲಿ ಸಂವಹನ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು. ಇದರಿಂದ ಭವಿಷ್ಯಕ್ಕೆ ಉತ್ತಮ ನಾಯಕರ ಕೊರತೆ ನೀಗುವಂತಾಗುತ್ತದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಕುಪ್ಪಂಡ ದತ್ತಾತ್ರಿ ಮಾತನಾಡಿ, ಉತ್ತಮ ಮಾತುಗಾರಿಕೆಯಿಂದ ರಾಜಕೀಯವಾಗಿ ಮುಂದುವರಿಯಲು ಅವಕಾಶವಿದೆ. ಉತ್ತಮ ರಾಜಕಾರಿಣೆಯಾಗಲು ಯುವ ಸಂಸತ್ತು ಕಾರ್ಯಕ್ರಮ ವೇದಿಕೆಯಾಗಲಿದೆ ಎಂದರು. ಯುವ ಪಾರ್ಲಿಮೆಂಟ್ ನೋಡೆಲ್ ಅಧಿಕಾರಿ ಮಂದೇಯಂಡ ವನಿತ್‍ಕುಮಾರ್ ಮಾತನಾಡಿ, ಯುವ ಸಂಸತ್ತು ಕಾರ್ಯಕ್ರಮ ದೇಶಕ್ಕೆ ಉತ್ತಮ ವಾಗ್ಮಿಗಳನ್ನು ರೂಪುಗೊಳಿಸಲು ಅವಕಾಶ ನೀಡುತ್ತಿದೆ ಎಂದರು.

ವಿದ್ಯಾರ್ಥಿಗಳು ಯುವ ಸಂಸತ್ ಕಾರ್ಯಕ್ರಮದಲ್ಲಿ ಭಯೋತ್ಪಾದನೆ, ಬಡತನ, ಪರಿಸರ ಸಂರಕ್ಷಣೆ, ಜಾತಿ ಪದ್ಧತಿ ವಿಷಯಗಳ ಬಗ್ಗೆ ಮಾತನಾಡಿದರು. ಉತ್ತಮ ದೇಶ ನಿರ್ಮಾಣಕ್ಕೆ ಜಾತಿ ಪದ್ಧತಿ ತೊಲಗಬೇಕು, ಪರಿಸರ ಕಾಳಜಿ, ಬಡತನ ನಿರ್ಮೂಲನೆ, ಗ್ರಾಮೋಧ್ಯೋಗಗಳು ಹೆಚ್ಚಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಕಾಲೇಜು ಎನ್‍ಎಸ್‍ಎಸ್ ಅಧಿಕಾರಿ ಎನ್.ಪಿ.ರೀತಾ ಉಪಸ್ಥಿತರಿದ್ದರು.