ಸೋಮವಾರಪೇಟೆ, ಜ. 17: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ವರ್ಷಾಚರಣೆಗೆ ಸಂಕ್ರಾಂತಿ ಹಬ್ಬದ ದಿನವಾದ ಮಂಗಳವಾರದಂದು ಗೋವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಸಂಘದ ಆವರಣದಲ್ಲಿ ಆಕಳು ಮತ್ತು ಕರುವಿಗೆ ಪೂಜೆ ಮಾಡಿ, ಎಳ್ಳು-ಬೆಲ್ಲವನ್ನು ಹಂಚುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ನಂತರ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಸಂಘದ ಅಧ್ಯಕ್ಷರಾದ ಬಿ.ಡಿ. ಮಂಜುನಾಥ್ ಮಾತನಾಡಿ, ಕೃಷಿಕರು ಬೆಳೆದ ಧಾನ್ಯ ಸಂಪತ್ತನ್ನು ಮನೆ ತುಂಬಿಕೊಳ್ಳುವ ಹಾಗೂ ಕೃಷಿಕರ ಜೀವಾಳವಾಗಿರುವ ದನ-ಕರುಗಳನ್ನು ಪೂಜಿಸುವ ದಿನವಾದ ಸಂಕ್ರಾಂತಿ ಹಬ್ಬದಂದು ಕಾಮಧೇನುವಿಗೆ ಪೂಜೆ ಸಲ್ಲಿಸುವ ಮೂಲಕ ಶತಮಾನೋತ್ಸವ ವರ್ಷಾಚರಣೆಗೆ ಚಾಲನೆ ನೀಡಲಾಗಿದೆ ಎಂದರು.

ಸುಮಾರು 100 ವರ್ಷಗಳ ಹಿಂದೆ ಸಹಕಾರ ಚಳುವಳಿಯ ಮೂಲಕ ಆರಂಭವಾದ ಸಹಕಾರ ಸಂಘಕ್ಕೆ ಹಿರಿಯ ಸಹಕಾರಿಗಳು, ಪಟ್ಟಣದ ಹೃದಯ ಭಾಗದಲ್ಲಿ ಸಂಘಕ್ಕೆ ಹಾಗೂ ವಿವಿಧೋದ್ಧೇಶ ಸಹಕಾರ ಸಂಘಕ್ಕೆ ಜಾಗವನ್ನು ಉದಾರವಾಗಿ ನೀಡಿದ್ದರು. ಅದರ ಫಲವಾಗಿ ಇಂದು ಎರಡು ಬೃಹತ್ ಕಟ್ಟಡಗಳು ನಿರ್ಮಾಣವಾಗಿ ಸಂಘಕ್ಕೆ ಆದಾಯವನ್ನು ತಂದುಕೊಡುತ್ತಿದೆ ಎಂದರು.

ಇಂತಹ ದಾನಿಗಳನ್ನು, ಸಂಘವನ್ನು ಅಭಿವೃದ್ಧಿ ಪಥದತ್ತ ಎಳೆದು ತಂದ ಈವರೆಗಿನ ಆಡಳಿತ ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರುಗಳು, ಸಿಬ್ಬಂದಿಗಳು ಹಾಗೂ ಸದಸ್ಯರುಗಳನ್ನು ಗುರುತಿಸಿ, ಗೌರವಿಸುವ ಕಾರ್ಯ ಶತಮಾನೋತ್ಸವ ವರ್ಷಾಚರಣಾ ಕಾರ್ಯಕ್ರಮಗಳಲ್ಲಿ ನಡೆಯಲಿದೆ ಎಂದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಕೆ.ಜಿ. ಸುರೇಶ್, ನಿರ್ದೇಶಕರುಗಳಾದ ಹೆಚ್.ಕೆ. ಮಾದಪ್ಪ, ಕೆ.ಎಸ್. ದಾಸಪ್ಪ, ಎಂ.ಎಸ್. ಲಕ್ಷ್ಮೀಕಾಂತ್, ಅರೆಯೂರು ಸೋಮಯ್ಯ, ಸೋಮಶೇಖರ್ (ಚೋಮಿ), ಬಿ.ಎಂ. ಸುರೇಶ್, ಸುಮಾ ಸುದೀಪ್, ನಳಿನಿ ಗಣೇಶ್, ರೂಪ ಸತೀಶ್ ಹಾಗೂ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಇದ್ದರು. ಕಾರ್ಯಕ್ರಮದಲ್ಲಿ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ. ಶಿವಕುಮಾರ್ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು, ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರುಗಳು, ಪ್ರಾ.ಕೃ.ಪ. ಸಹಕಾರ ಸಂಘದ ಸಿಬ್ಬಂದಿಗಳೂ ಸೇರಿದಂತೆ ನೂರಾರು ಮಂದಿ ಸಹಕಾರಿಗಳು ಪಾಲ್ಗೊಂಡಿದ್ದರು.