ಗೋಣಿಕೊಪ್ಪಲು, ಜ. 17: ಕೊಡಗು ಜಿಲ್ಲೆಯ ಜಾತ್ಯತೀತ ಜನತಾದಳ ಪಕ್ಷವು ನಾವಿಕನಿಲ್ಲದ ದೋಣಿಯಂತಾಗಿದ್ದು ಜಿಲ್ಲೆಗೆ ಪಕ್ಷದ ಅಧ್ಯಕ್ಷರಿಲ್ಲದೆ ಕಾರ್ಯಕರ್ತರು ಅತಂತ್ರರಾಗಿದ್ದಾರೆ. ಪಕ್ಷ ಅಧಿಕಾರದಲ್ಲಿದ್ದರೂ ಕ್ಷೇತ್ರಕ್ಕೆ ಕೆಲಸ ಮಾಡಿಸಿಕೊಳ್ಳುವ ಅವಕಾಶವಿದ್ದರೂ ನಾಯಕರೆನಿಸಿಕೊಂಡವರು ಮೂಲೆ ಸೇರಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಉದ್ಭವ ಮೂರ್ತಿಗಳಾಗಿ ಕಾಣಿಸಿಕೊಳ್ಳುವ ಮುಖಂಡರೆನಿಸಿಕೊಂಡವರು ಬಿಲ ಸೇರಿದ್ದಾರೆ. ಈ ಹಿಂದೆ ಇದ್ದಂತಹ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯನವರ ರಾಜೀನಾಮೆಯನ್ನು ಅಂಗೀಕರಿಸದೆ ಪಕ್ಷದ ರಾಜ್ಯ ವರಿಷ್ಠರು ಇನ್ನೂ ಕೂಡ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಪಕ್ಷವು ನಶಿಸುವ ಸಂದರ್ಭದಲ್ಲಿ ಜೆಡಿಎಸ್‍ನ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ದೇವೆಗೌಡರು ವೀರಾಜಪೇಟೆಯ ಮೇರಿಯಂಡ ಸಂಕೇತ್ ಪೂವಯ್ಯ ಅವರಿಗೆ ಪಕ್ಷ ಕಟ್ಟುವ ಜವಾಬ್ದಾರಿ ನೀಡಿದ್ದರು. ಅಧಿಕಾರ ಇಲ್ಲದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಪ್ರಯತ್ನ ನಡೆಸಿದ್ದರು.

ತನ್ನ ಸ್ವಕ್ಷೇತ್ರ ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕುಗಳಲ್ಲಿ ಪಕ್ಷ ಸಂಘಟನೆ ಹಂತ ಹಂತವಾಗಿ ಬೆಳೆಸಿದರು. ಸೋಮವಾರಪೇಟೆಯಲ್ಲಿ ಜೆಡಿಎಸ್ ಖಾತೆ ತೆರೆಯುವ ಆಶಾ ಭಾವನೆಯು ಎಲ್ಲರಲ್ಲಿ ಮೂಡಿತ್ತು. ಕೊನೆಗಳಿಗೆಯ ರಾಜಕೀಯ ಬದಲಾವಣೆಯಲ್ಲಿ ಜೀವಿಜಯ ಸೋಲನ್ನು ಕಂಡಿದ್ದರು.

ಜೆಡಿಎಸ್‍ನ ಸಾರಥ್ಯ ವಹಿಸಲು ಜಿಲ್ಲೆಯಲ್ಲಿ ಯಾರೂ ಒಪ್ಪದಿದ್ದಾಗ ಪಕ್ಷದ ವರಿಷ್ಠರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಯ ಜವಾಬ್ದಾರಿಯನ್ನು ಸಂಕೇತ್ ಪೂವಯ್ಯ ಅವರ ಹೆಗಲಿಗೆ ವಹಿಸಿದ್ದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಗಣಪತಿ ಅತ್ಮಹತ್ಯೆ ಪ್ರಕರಣದಲ್ಲಿ ಕುಮಾರಸ್ವಾಮಿ ನಡುರಾತ್ರಿಯಲ್ಲಿ ಜಿಲ್ಲೆಗೆ ಆಗಮಿಸಿ ಸಂಚಲನ ಮೂಡಿಸಿದ್ದರು. ಪಕ್ಷದ ಜಿಲ್ಲಾಧ್ಯಕ್ಷ ಆಗಿದ್ದ ಸಂಕೇತ್ ಪೂವಯ್ಯ ಈ ಪ್ರಕರಣದಲ್ಲಿ ಗಣಪತಿಯವರ ಕುಟುಂಬದೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡು ನ್ಯಾಯಾಂಗ ಹೋರಾಟಕ್ಕೆ ಒಂದು ಹೆಜ್ಜೆ ಮುಂದಿಟ್ಟಿದ್ದರು. ಈ ಹೋರಾಟದ ಫಲದಿಂದ ಸಚಿವರಾಗಿದ್ದ ಕೆ.ಜೆ. ಜಾರ್ಜ್ ರಾಜೀನಾಮೆ ಸಲ್ಲಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ದೂರು ದಾಖಲಾಯಿತು. ಈ ಸುದ್ದಿಯು ರಾಷ್ಟ್ರಮಟ್ಟದಲ್ಲಿಯೂ ಸಂಚಲನವಾಯಿತು. ಪ್ರಸ್ತುತ ಗಣಪತಿ ಆತ್ಮಹತ್ಯೆ ಪ್ರಕರಣವು ಸಿಬಿಐ ತನಿಖೆಯಲ್ಲಿದೆ.

ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷದಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ, ಹುಲಿ ಹಾವಳಿಯಿಂದ ಜಾನುವಾರು ಕಳೆದುಕೊಂಡವರಿಗೆ, ಸಾಲ ಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡ ಸಂದರ್ಭ ಹಾಗೂ ಬೆಳೆದುನಿಂತ ಭತ್ತದ ಫಸಲನ್ನು ಕಾಡಾನೆಗಳು ದ್ವಂಸ ಮಾಡಿದ ಸಂದರ್ಭ ಸಂಕೇತ್ ಪೂವಯ್ಯ ಆಯಾಯಾ ಸ್ಥಳಗಳಿಗೆ ಖುದ್ದು ಭೇಟಿ ನೀಡುವ ಮೂಲಕ ನೊಂದ ಕುಟುಂಬಗಳಿಗೆ ವೈಯುಕ್ತಿಕ ಸಹಾಯ ಧನ ನೀಡಿದ್ದರು.

ತನ್ನ ಸ್ವಾಭಿಮಾನಕ್ಕೆ ಅಡ್ಡಿ ಬಂದ ಸಂದರ್ಭದಲ್ಲಿ ಪಕ್ಷ ಅಧಿಕಾರದಲ್ಲಿದ್ದರೂ ಇದ್ಯಾವದಕ್ಕೂ ಮನ್ನಣೆ ನೀಡದೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇವರ ರಾಜೀನಾಮೆಯಿಂದ ಜಿಲ್ಲೆಯಲ್ಲಿ ಚೇತರಿಕೆ ಕಂಡಿದ್ದ ಪಕ್ಷವೂ ಹಂತ ಹಂತವಾಗಿ ಕುಸಿಯಲಾರಂಭಿಸಿತು.

ಜಿಲ್ಲೆಯ ಮುಖಂಡರೆನಿಸಿಕೊಂಡವರ ಮಾತಿಗೆ ಕಟ್ಟು ಬಿದ್ದ ಕೆಲವು ಕಾರ್ಯಕರ್ತರು ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಗೆ ಆಗಮಿಸಿದ ಸಂದರ್ಭ ಸಂಕೇತ್ ಪೂವಯ್ಯ ಅವರ ವಿರುದ್ಧ ಕೂಗಿದ ಘೋಷಣೆಯಿಂದ ಸಂಕೇತ್ ಖಿನ್ನರಾಗಿದ್ದರು. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಜಿಲ್ಲೆಯ ಬಡವರ ಸಮಸ್ಯೆಗಳು ಪರಿಹಾರ ಕಾಣಲಿದೆ ಎಂದು ಸದಾ ಸಭೆ ಸಮಾರಂಭದಲ್ಲಿ ಕಾರ್ಯಕರ್ತರಿಗೆ ಭರವಸೆ ನೀಡುತ್ತಿದ್ದ ಸಂಕೇತ್ ಪೂವಯ್ಯ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಧಿಕಾರದಿಂದ ದೂರ ಉಳಿದಿದ್ದರು. ಇದೀಗ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ನೆಲಕಚ್ಚಿದೆ.

ಕಳೆದ ಆರು ತಿಂಗಳ ಹಿಂದೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಸಂಕೇತ್ ಪೂವಯ್ಯ ಅವರ ರಾಜೀನಾಮೆಯನ್ನು ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೆಗೌಡ ಅವರು ಇನ್ನು ಕೂಡ ಅಂಗೀಕರಿಸಿಲ್ಲ. ಇದರಿಂದ ಜಿಲ್ಲೆಯಲ್ಲಿ ಅಧ್ಯಕ್ಷರಿಲ್ಲದೆ ಪಕ್ಷ ನೆಲೆ ಕಚ್ಚಿದೆ - ಕಾರ್ಯಕರ್ತರು ಅತಂತ್ರವಾಗಿದ್ದಾರೆ.

- ಹೆಚ್.ಕೆ. ಜಗದೀಶ್