ಮಡಿಕೇರಿ, ಜ. 17: ಕೊಡಗು ಪ್ರವಾಸೋದ್ಯಮದ ಕಾಯಕಲ್ಪಕ್ಕೆ ಆಯೋಜಿತ ಕೊಡಗು ಪ್ರವಾಸಿ ಉತ್ಸವ ಅಭೂತಪೂರ್ವ ರೀತಿಯಲ್ಲಿ ಯಶಸ್ಸುಗೊಂಡಿದ್ದು, ಮುಂದಿನ ದಿನಗಳಲ್ಲಿಯೂ ವ್ಯವಸ್ಥಿತ ರೀತಿಯಲ್ಲಿ ಪ್ರವಾಸಿಗರನ್ನು ಕೊಡಗಿಗೆ ಸೆಳೆಯುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಹೇಳಿದ್ದಾರೆ.
ಕೊಡಗು ಪ್ರವಾಸಿ ಉತ್ಸವದ ಯಶಸ್ಸಿನ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಮುಂದೇನು ಎಂಬ ಕುರಿತಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲಕ್ಷ್ಮಿಪ್ರಿಯ, ಜಿಲ್ಲಾ ಉಸ್ತುವಾರಿ ಸಚಿವರ ಅವಿರತ ಪ್ರಯತ್ನದ ಫಲವಾಗಿಯೇ ಸಾಕಾರಗೊಂಡ ಕೊಡಗು ಪ್ರವಾಸಿ ಉತ್ಸವ ಯಾವದೇ ಸಮಸ್ಯೆಗಳಿಲ್ಲದಂತೆ ಮುಕ್ತಾಯ ಗೊಂಡಿದ್ದು, ಜನರ ಸ್ಪಂದನವೂ ನಿರೀಕ್ಷೆಗೆ ಮೀರಿತ್ತು. ಉತ್ಸವದ ಯಶಸ್ವಿಗೆ ಸಹಕರಿಸಿದ ವಿವಿಧ ಸಂಘಗಳ ಪದಾಧಿಕಾರಿಗಳು ಶ್ಲಾಘನಾರ್ಹರು ಎಂದರು.
ಮುಂದಿನ ದಿನಗಳಲ್ಲಿಯೂ ಇಂಥ ಕಾರ್ಯಕ್ರಮಗಳ ಮೂಲಕ ಕೊಡಗಿಗೆ ಪ್ರವಾಸಿಗರು ಬರುವಂತೆ ಯೋಜನೆ ರೂಪಿಸಲಾಗುತ್ತದೆ ಎಂದರು.
ಕೊಡಗು ಹೋಟೆಲ್ ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ಕೊಡಗು ಸುರಕ್ಷಿತವಾಗಿದೆ ಎಂಬ ಸಂದೇಶವನ್ನು ಪರಿಣಾಮಕಾರಿ ಯಾಗಿ ಸಾರುವಲ್ಲಿ ಕೊಡಗು ಪ್ರವಾಸಿ ಉತ್ಸವ ಸಫಲವಾಗಿದೆ. ಸಾವಿರಾರು ಜನರು ಮೂರು ದಿನಗಳ ಪ್ರವಾಸೀ ಉತ್ಸವದಲ್ಲಿ ಪಾಲ್ಗೊಂಡಿದ್ದು ತಮ್ಮೆಲ್ಲರ ಶ್ರಮ ಸಾರ್ಥಕಗೊಳಿಸಿದೆ. ಪ್ರವಾಸಿ ಉತ್ಸವ ಕೊಡಗು ಪ್ರವಾಸೋದ್ಯಮದ ಚೇತರಿಕೆಗೆ ಸಾಕಷ್ಟು ಕೊಡುಗೆ ನೀಡಿದೆ. ಸಾಂಸ್ಕøತಿಕ ಕಾರ್ಯಕ್ರಮಗಳು, ಫಲಪುಪ್ಪ ಪ್ರದರ್ಶನ, ಆಹಾರ ಮೇಳದೊಂದಿಗೆ ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ಆಯೋಜಿತ ಸ್ಟ್ರೀಟ್ ಫೆಸ್ಟಿವಲ್ ಕೂಡ ಅತ್ಯಂತ ಯಶಸ್ಸಾಗಿರುವದು ಸಂತೋಷ ತಂದಿದೆ ಎಂದರು.
ಮುಂದಿನ ವರ್ಷಗಳಲ್ಲಿಯೂ ಕೊಡಗು ಪ್ರವಾಸಿ ಉತ್ಸವವನ್ನು ಆಯೋಜಿಸುವಂತಾಗಬೇಕೆಂದು ಮನವಿ ಮಾಡಿದರು. ಪ್ರವಾಸೋದ್ಯಮ ಸಚಿವರು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು, ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಪ್ರವಾಸಿ ಉತ್ಸವದ ಯಶಸ್ವಿಗೆ ನೀಡಿದ ಸಹಕಾರವನ್ನು ಸ್ಮರಿಸಿದರು.
ಜಿಲ್ಲಾ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಜಿ.ಚಿದ್ವಿಲಾಸ್ ಮಾತನಾಡಿ, ಪ್ರವಾಸೋದ್ಯಮ ಚಟುವಟಿಕೆ ಸಂಬಂಧಿತ ನಾನಾ ಕಾರ್ಯಕ್ರಮಗಳನ್ನು ಕೊಡಗಿನಲ್ಲಿ ಆಯೋಜಿಸಲು ಅವಕಾಶಗಳಿವೆ. ಕೊಡಗಿನ ಜನ ಇಂಥ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಾರೆ ಎಂಬುದಕ್ಕೆ ಪ್ರವಾಸೀ ಉತ್ಸವದ ಮೂರೂ ದಿನಗಳು ಗಾಂಧಿ ಮೈದಾನಕ್ಕೆ ಬಂದ ಜನಸ್ತೋಮವೇ ಸಾಕ್ಷಿಯಾಗಿದೆ. ಈಗಾಗಲೇ ಜಿಲ್ಲಾಡಳಿತದಲ್ಲಿನ ಕೊಡಗು ಉತ್ಸವ ಮತ್ತು ಗಡಿಉತ್ಸವದ ಅನುದಾನ ಬಳಸಿಕೊಂಡು ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ಸರ್ಕಾರದಿಂದ ಹಬ್ಬದ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯ ಬೇಕೆಂದು ಮನವಿ ಮಾಡಿದರು.
ಕೊಡಗು ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಡಿವೈಎಸ್ಪಿ ಸುಂದರರಾಜ್, ಕೂರ್ಗ್ ಟ್ರಾವಲ್ ಅಸೋಸಿಯೇಶನ್ ಅಧ್ಯಕ್ಷ ಚೆಯ್ಯಂಡ ಸತ್ಯ, ಪೌರಾಯುಕ್ತ ರಮೇಶ್, ಪೆÇಲೀಸ್ ಅಧಿಕಾರಿಗಳಾದ ಅನೂಪ್ ಮಾದಪ್ಪ, ಷಣ್ಮುಗ, ಚೇತನ್, ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ನಿರ್ದೇಶಕ ಎ.ಕೆ.ನವೀನ್, ಪಶುವೈದ್ಯಕೀಯ ಇಲಾಖೆಯ ಅಧಿಕಾರಿ ತಮ್ಮಯ್ಯ, ತೋಟಗಾರಿಕಾ ಇಲಾಖಾಧಿಕಾರಿ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕøತಿ ಇಲಾಖಾಧಿಕಾರಿ ದರ್ಶನ್, ಸಂಬಾರ ಮಂಡಳಿ, ಚೆಸ್ಕಾಂ ಅಧಿಕಾರಿಗಳು, ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ನಾಸಿರ್, ಖಜಾಂಚಿ ಕೆ.ಕೆ. ಭಾಸ್ಕರ್, ಸಿದ್ದು, ಕೋಠಿ, ದಿನೇಶ್ ಕಾರ್ಯಪ್ಪ, ಅಸೋಸಿಯೇಷನ್ ಗೌರವ ಸಲಹೆಗಾರ ಅನಿಲ್ ಎಚ್.ಟಿ, ಟ್ರಾವಲ್ ಅಸೋಸಿಯೇಶನ್ನ ವಸಂತ್, ಕೆ.ಎಸ್.ಟಿ.ಡಿ.ಸಿ. ವ್ಯವಸ್ಥಾಪಕ ಕಿರಣ್ ಇತರರು ಇದ್ದರು.