ಮಡಿಕೇರಿ, ಜ. 17: ಯಶಸ್ವಿ ಮಹಿಳಾ ಸಂಘ ಮತ್ತು ಮಡಿಕೇರಿಯ ಶ್ರೀ ರಾಜರಾಜೇಶ್ವರಿ ಆಸ್ಪತ್ರೆಯ ಸಹಯೋಗದೊಂದಿಗೆ ಕಾಲೂರಿನಲ್ಲಿ ಸಂತ್ರಸ್ತ ಮಹಿಳೆಯರಿಗಾಗಿ ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿ¸ Àಲಾಗಿತ್ತು.
ಇತ್ತೀಚೆಗೆ ಕಾಲೂರಿನ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಾಹಿತಿ ನಾಗೇಶ್ ಕಾಲೂರು ಉದ್ಘಾಟಿಸಿ ಪ್ರಾಕೃತಿಕ ವಿಕೋಪದಲ್ಲಿ ನಲುಗಿ ಹೋದ ಕಾಲೂರು ಗ್ರಾಮ ಮತ್ತು ಗ್ರಾಮದ ಜನತೆಗೆ ದಾನಿಗಳು, ಹಿತೈಷಿಗಳು, ಸಂಘ ಸಂಸ್ಥೆಗಳು ನೀಡಿದ ನೆರವು ಮತ್ತು ಈಗ ವೈದ್ಯಕೀಯ ನೆರವು ನೀಡುತ್ತಿರುವ ಆರ್.ಆರ್. ಆಸ್ಪತ್ರೆಯ ಸಹಾಯವನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತ್ರಸ್ತ ಮಹಿಳೆ ಯರನ್ನು ತಪಾಸಣೆ ನಡೆಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ ಆರ್.ಆರ್. ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ರಾಜೇಶ್ವರಿ ನವೀನ್‍ಕುಮಾರ್ ಅವರು ಗ್ರಾಮೀಣ ಬಾಗದಲ್ಲಿರುವ ಜನರಿಗೂ ವೈದ್ಯಕೀಯ ಸೌಲಭ್ಯಗಳನ್ನು ಕೈಗೆಟಕುವ ದರದಲ್ಲಿ ತಲಪಿಸುವದು ನಮ್ಮ ಆಶಯವಾಗಿದೆ ಎಂದು ಹೇಳಿದರು. ಸಾಹಿತಿ ಡಾ.ನಯನ ಕಶ್ಯಪ್ ಅವರು ಸಂಕಷ್ಟದಲ್ಲಿ ರುವವರಿಗೆ ಪರಸ್ಪರ ನೆರವಾಗಿರುವದು ಮಾನವೀಯತೆಯ ಲಕ್ಷಣವಾಗಿದ್ದು, ಆ ಕೆಲಸ ನಮ್ಮಲ್ಲಿ ಸಹೃದಯತೆ ಯಿಂದ ಆಗಿರುವದು ಸಂತೋಷದ ವಿಚಾರ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಾಳಿಬೀಡು ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಎ. ಪೊನ್ನಪ್ಪ ಅವರು ಮಾತನಾಡಿ ಸಂಕಷ್ಟದಲ್ಲಿರುವ ಕಾಲೂರು ಜನರಿಗೆ ವೈದ್ಯಕೀಯ ಶಿಬಿರದಿಂದ ತುಂಬ ಅನೂಕೂಲ ವಾಗಿದ್ದು, ಉಳಿದಂತೆ ಇತರ ಸಂಘ ಸಂಸ್ಥೆಗಳು, ದಾನಿಗಳು ಮತ್ತು ಇತರರ ನೆರವನ್ನು ಸ್ಮರಿಸಿದರು.
100ಕ್ಕೂ ಹೆಚ್ಚು ಮಹಿಳೆಯರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಕಾಲೂರು ಗ್ರಾಮಸ್ಥರ ಪರವಾಗಿ ಯಶಸ್ವಿ ಮಹಿಳಾ ಸಂಘದವರು ಕಾಲೂರಿನ ಜನತೆಗೆ ಆಸರೆಯಾಗಿ ಭಾರತೀಯ ವಿದ್ಯಾಭವನ ಪ್ರ್ರಾಜೇಕ್ಟ್ ಕೂರ್ಗ್ ಮೂಲಕ ನೆರವು ಕಲ್ಪಿಸಿದ ಬಾಲಾಜಿ ಕಶ್ಯಪ್ ಮತ್ತು ನಯನ ಕಶ್ಯಪ್ ಅವರನ್ನು ಸನ್ಮಾನಿಸಿದರು.