ಮಡಿಕೇರಿ, ಜ. 17: ಮಡಿಕೇರಿ ತಾಲೂಕು ಜೋಡುಪಾಲದಲ್ಲಿ ನಾರ್ಕೋಡಿ ಚರಣ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಿಳಿದು ಬಂದಿದ್ದು, ಪರಿಶೀಲನೆ ನಡೆಸಲಾಗಿ ಮೃತರು 2ನೇ ಮೊಣ್ಣಂಗೇರಿ ಗ್ರಾಮದ ನಿವಾಸಿಯಾಗಿದ್ದು, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹಾನಿಗೊಳಗಾದ ಮನೆಯಲ್ಲಿ ವಿಷ ಸೇವಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತರಾಗಿರುವದಾಗಿ ಕುಟುಂಬದ ಮೂಲದಿಂದ ತಿಳಿದು ಬಂದಿರುತ್ತದೆ. ಮೃತರ ತಾಯಿ ಎನ್.ಬಿ. ಶೀಲಾವತಿ ಹೆಸರಿನಲ್ಲಿ ಸ.ನಂ.20/43ಪಿ1 ರ 2.00 ಎಕರೆ ಮತ್ತು 20/44ಪಿ1 ರ 1.90 ಎಕರೆ ಒಟ್ಟು 3.90 ಎಕರೆ ಕಾಫಿ ತೋಟವಿದ್ದು, ಪಹಣಿ ಶೀಲಾವತಿಯವರ ಹೆಸರಿನಲ್ಲಿ ದಾಖಲಿರುತ್ತದೆ. 2ನೇ ಮೊಣ್ಣಂಗೇರಿಯ ಮನೆ ಹಾನಿಗೆ ಸಂಬಂಧಪಟ್ಟಂತೆ ಸರ್ಕಾರದ ವತಿಯಿಂದ ನೀಡಲಾಗುವ ಎಲ್ಲಾ ಪರಿಹಾರವನ್ನು ಸಕಾಲದಲ್ಲಿ ನೀಡಲಾಗಿದೆ ಹಾಗೂ ಪುನರ್ವಸತಿ ಕಲ್ಪಿಸಲು ಫಲಾನುಭವಿಗಳ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ.
ಮೃತರ ತಾಯಿ ಶೀಲಾವತಿ ಯವರಿಗೆ ಪೂರ್ಣ ಮನೆ ಹಾನಿ ಬಾಬ್ತು ರೂ.1,01,900 ಹಾಗೂ ಗೃಹೋಪಯೋಗಿ ವಸ್ತುಗಳ ಹಾನಿ ಬಾಬ್ತು ರೂ.50 ಸಾವಿರ ಹಾಗೂ ತುರ್ತು ಪರಿಹಾರವಾಗಿ ರೂ.3,800 ಮತ್ತು ಮನೆ ನಿರ್ಮಾಣವಾಗುವವರೆಗೆ ಬಾಡಿಗೆ ಮನೆ ಮಾಡಿಕೊಂಡು ಜೀವನ ನಿರ್ವಹಿಸಲು ಸರ್ಕಾರದ ಆದೇಶದಂತೆ ಮಾಸಿಕ ಮನೆ ಬಾಡಿಗೆ ಭತ್ಯೆ ರೂ.10 ಸಾವಿರಗಳನ್ನು ಸಕಾಲದಲ್ಲಿ ನಿಯಮಾನುಸಾರ ಅವರಿಗೆ ಪಾವತಿಸಲಾಗಿರುತ್ತದೆ.
ಮೃತರು ಅವಿವಾಹಿತರಾಗಿದ್ದು, ತನ್ನ ಹಾಗೂ ತಾಯಿಯ ಹೆಸರಿನಲ್ಲಿ ವೈಯಕ್ತಿಕ ಸಾಲ ಮಾಡಿಕೊಂಡಿದ್ದು, ಮೃತರು ತನ್ನ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವದರಿಂದ ಹಾಗೂ ತೋಟ, ವಾಸದ ಮನೆ ಕಳೆದುಕೊಂಡು ಮಾನಸಿಕ ಜರ್ಜರಿತರಾಗಿ ವಿಷ ಸೇವಿಸಿರುವದು ಕಂದಾಯಾಧಿಕಾರಿಗಳ ಪರಿಶೀಲನೆ ಯಿಂದ ತಿಳಿದು ಬಂದಿರುತ್ತದೆ. ಈ ಘಟನೆಗೆ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿಯ ವಿಳಂಬದ ಕಾರಣವಾಗಿರುವದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ.