ಸೋಮವಾರಪೇಟೆ, ಜ17 : ಕನ್ನಡ ಭಾಷೆ ಬಳಕೆ ಮತ್ತು ಬರವಣಿಗೆಯ ಬಗ್ಗೆ ಯಾವದೇ ತಾತ್ಸಾರ ಮಾಡಬಾರದು ಎಂದು ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಅಭಿಪ್ರಾಯಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಒಕ್ಕಲಿಗರ ಸಂಘ, ಸ್ಪಂದನ ಗ್ರಾಮೀಣ ಶಿಕ್ಷಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಇಲ್ಲಿನ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ‘ಪತ್ರಿಕೋದ್ಯಮದಲ್ಲಿರುವ ಮುಂದಿನ ಅವಕಾಶಗಳು’ ವಿಷಯದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಓದುವ, ಬರೆಯುವ ಕಲೆಯನ್ನು ರೂಢಿಸಿಕೊಳ್ಳಬೇಕು. ಇಂಗ್ಲೀಷ್ ವ್ಯಾಮೋಹದಿಂದ ಕನ್ನಡದ ಬಗ್ಗೆ ತಾತ್ಸಾರ ಮಾಡಬಾರದು. ಸಾಮಾಜಿಕ ಜಾಲತಾಣಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಅದಕ್ಕೆ ದಾಸರಾದರೆ ಅನಾಹುತ ಖಂಡಿತ ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ವಿದ್ಯಾರ್ಥಿಗಳಿಗೆ ಮುಂದೆ ಗುರಿ, ಹಿಂದೆ ಗುರು ಇದ್ದರೆ ಸಾಧನೆಯ ಮೆಟ್ಟಿಲೇರಬಹುದು. ಕನ್ನಡ ಪಾಂಡಿತ್ಯವನ್ನು ಪಡೆದರೆ ಉತ್ತಮ ಪತ್ರಕರ್ತರಾಗಬಹುದು. ಕನ್ನಡ ಚೆನ್ನಾಗಿ ಕಲಿಯಿರಿ. ತಮ್ಮಲ್ಲಿರುವ ಸಂಕುಚಿತ ಮನೋಭಾವದಿಂದ ಹೊರಬಂದರೆ ಮಾತ್ರ ಭವಿಷ್ಯದಲ್ಲಿ ಸಾಧನೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಎಸ್ಡಿಎಂ ಕಾಲೇಜಿನ ಕೆ.ಎನ್. ಸ್ಕಂದ ಮಾತನಾಡಿ, ಬರವಣಿಗೆಯೇ ಪ್ರತ್ರಿಕೋದ್ಯಮ ಪ್ರವೇಶಿಸಲು ಅರ್ಹತೆಯಾಗಿದ್ದು, ಧೈರ್ಯ, ಶ್ರದ್ಧೆ, ಶಿಸ್ತು, ಪ್ರತಿಫಲಾಪೇಕ್ಷೆಯಿಲ್ಲದ ಕೆಲಸ, ಸಮಯಪಾಲನೆ, ಶುದ್ಧ ಹಸ್ತ ಇವಿಷ್ಟು ಇದ್ದರೆ, ಜನಮೆಚ್ಚುವ ಪತ್ರಕರ್ತನಾಗಬಹುದು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಸದೃಢ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಅಪಾರವಾದುದು ಎಂದರಲ್ಲದೇ, ಶಾಲಾ ಕಾಲೇಜುಗಳು ವಿದ್ಯಾರ್ಥಿಗಳ ಮಾಕ್ರ್ಸ್ಗಳಿಸುವ ಕಾರ್ಖಾನೆಗಳಾಗದೇ ವಿದ್ಯಾರ್ಥಿ ಗಳನ್ನು ಸಮಾಜಮುಖಿಗಳಾಗಿ ರೂಪುಗೊಳಿಸುವ ಸಂಸ್ಥೆಗಳಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ಹರೀಶ್ಕುಮಾರ್ ವಹಿಸಿ ಮಾತನಾಡಿದರು. ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಎ. ಮುರಳೀಧರ್, ಪ್ರಾಂಶುಪಾಲ ಎಚ್.ಎಸ್. ಶರಣ್ ಅವರುಗಳು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಎಸ್ಡಿಎಂ ಕಾಲೇಜಿನ ಕೆ.ಎನ್. ಸ್ಕಂದ, ಸಿನಿಮಾ ಸಹಾಯಕ ನಿರ್ದೇಶಕ ಗಣಪತಿ ದಿವಾಣ ಅವರುಗಳು, ಪತ್ರಿಕೋದ್ಯಮದ ವಿವಿಧ ಆಯಾಮ, ಛಾಯಾಗ್ರಹಣದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿದರು. ವಿದ್ಯಾರ್ಥಿಗಳಾದ ಚಿತ್ರ, ಭವಾನಿ, ಕಾವ್ಯ, ಜೀವಿತ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.