ಮಡಿಕೇರಿ, ಜ. 14: ಪ್ರಕೃತಿ ವಿಕೋಪಕ್ಕೆ ಸಿಲುಕಿ ಭೂ ಕುಸಿತದಿಂದ ಸಾವು ನೋವು ಸಂಭವಿಸಿದ ಹೆಮ್ಮೆತ್ತಾಳು ಗ್ರಾಮದಲ್ಲಿರುವ ಶ್ರೀ ಬೇಟೆ ಅಯ್ಯಪ್ಪ ದೇವಾಲಯದಲ್ಲಿ ಮಕರ ಸಂಕ್ರಮಣ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮನೆ, ಮಠ, ತೋಟಗಳನ್ನು ಕಳೆದುಕೊಂಡು ನಿರಾಶ್ರಿತರಾಗಿ ಎಲ್ಲೆಲ್ಲೋ ವಾಸವಿದ್ದು ಜೀವನ ದೂಡುತ್ತಿರುವ ಗ್ರಾಮಸ್ಥರು ನೋವು ಮರೆತು ಅಯ್ಯಪ್ಪನ ಪೂಜೆಯಲ್ಲಿ ಪಾಲ್ಗೊಂಡರು. ಇಲ್ಲಿನ ಆದಂ ಎಸ್ಟೇಟ್‍ನಲ್ಲಿರುವ ದೇವಾಲಯದಲ್ಲಿ ವ್ಯವಸ್ಥಾಪಕ ಅಯ್ಯಪ್ಪ, ಮೇಲ್ವಿಚಾರಕ ಚಂದ್ರಶೇಖರ್ ಪೂಜೆಯ ಉಸ್ತುವಾರಿ ವಹಿಸಿದ್ದರು. ಅರ್ಚಕ ಶ್ರೀಕೃಷ್ಣ ಮಾರಿತ್ತಾಯ ಪೂಜಾ ವಿಧಿಗಳನ್ನು ನೆರವೇರಿಸಿದರು. ತಕ್ಕರಾದ ಅಯ್ಯಕುಟ್ಟಿರ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಹಾಮಂಗಳಾರತಿ ಬಳಿಕ ನಡೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭೂಕುಸಿತ ಸಂಭವಿಸಿದ ಬಳಿಕ ಇದೇ ಮೊದಲು ಹತ್ತಾರು ಮಂದಿ ಒಂದೇ ಕಡೆಯಲ್ಲಿ ಸೇರುವ ಅವಕಾಶ ಒದಗಿಬಂದಿತ್ತು.