ಕೂಡಿಗೆ, ಜ.16 : ಹಾರಂಗಿ ಮತ್ತು ಕಾವೇರಿ ನದಿಗಳ ದಡದಲ್ಲಿರುವ ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಕೂಡಿಗೆ ಸರ್ಕಲಿನ 82 ನೆರೆಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಬಾರದ ಹಿನ್ನೆಲೆ ನೊಂದ ನೆರೆಸಂತ್ರಸ್ತರು ಕೂಡಿಗೆ ಗ್ರಾ.ಪಂ ಗೆ ಮುತ್ತಿಗೆ ಹಾಕಿದ ಘಟನೆ ಬುಧವಾರ ನಡೆದಿದೆ.
ಕಳೆದ ಆರು ತಿಂಗಳ ಹಿಂದೆ 82 ಮನೆಗಳಿಗೆ ನೀರು ನುಗ್ಗಿ ಮನೆಗೆ ಹಾನಿ ಸಂಭವಿಸಿದ್ದು, ಮನೆ ಸ್ವಚ್ಛತೆಗಾಗಿ ಪ್ರಾರಂಭದಲ್ಲಿ ಕಂದಾಯ ಇಲಾಖೆಯ ವತಿಯಿಂದ 3800 ರೂಗಳ ಚೆಕ್ ವಿತರಣೆ ಮಾಡಲಾಗಿತ್ತು. ಹಾನಿಗೊಳಗಾದ ಮನೆಯನ್ನು ಸರಿಪಡಿಸಲೆಂದು 50 ಸಾವಿರ ರೂಗಳನ್ನು ನೀಡುವದಾಗಿ ಭರವಸೆ ನೀಡಲಾಗಿತ್ತು. ಕುಶಾಲನಗರ ಹಾಗೂ ಮುಳ್ಳುಸೋಗೆ ಗ್ರಾ.ಪಂ ವ್ಯಾಪ್ತಿಯ ನೆರೆಸಂತ್ರಸ್ತರಿಗೆ ಈಗಾಗಲೇ 50 ಸಾವಿರ ಪರಿಹಾರ ಧನವನ್ನು ವಿತರಿಸಲಾಗಿದ್ದು, ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಸಂತ್ರಸ್ತರಿಗೆ ಇನ್ನೂ ಕೂಡಾ ಪರಿಹಾರ ಧನ ಸಿಗಲಿಲ್ಲ ಎಂದು ಸಂತ್ರಸ್ತರು ಕೂಡಿಗೆ ಗ್ರಾ.ಪಂ.ಯ ಮಾಸಿಕ ಸಭೆ ನಡೆಯುವ ವೇಳೆ ಪಂಚಾಯಿತಿಗೆ ಮುತ್ತಿಗೆ ಹಾಕಿ ಸಭೆಯನ್ನು ಸ್ಥಗಿತಗೊಳಿಸಿ ಸ್ಥಳಕ್ಕೆ ತಹಶೀಲ್ದಾರರು ಕೂಡಲೇ ಆಗಮಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಜಿ.ಪಂ ಸದಸ್ಯೆ ಮಂಜುಳಾ ಸ್ಥಳಕ್ಕಾಗಮಿಸಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗನನ್ನು ಸ್ಥಳಕ್ಕೆ ಕರೆಸಿ ಮಾಹಿತಿ ಪಡೆದರು. ಕೂಡಿಗೆ ಗ್ರಾ.ಪಂ.ನ 82 ಜನರ ಪಟ್ಟಿಯು ಸೋಮವಾರಪೇಟೆಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ತಾಲೂಕು ಕಚೇರಿಯಿಂದ ನೋಂದಣಿಗೊಳ್ಳದೇ ಪುನಃ ಕೂಡಿಗೆ ಗ್ರಾ.ಪಂ. ಗೆ ಕಡತಗಳು ವಾಪಸ್ಸು ಬಂದಿದ್ದು, ಕಡತಕ್ಕೆ ನೆರೆಸಂತ್ರಸ್ತರ ಆಧಾರ್ ಕಾರ್ಡ್ ಮತ್ತು ಬ್ಯಾಂಕಿನ ದಾಖಲಾತಿಗಳನ್ನು ಒದಗಿಸಲು ತಿಳಿಸಿರುತ್ತಾರೆ. ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದು, ಆದಷ್ಟು ಬೇಗನೇ ಸರಿಪಡಿಸುವಂತೆ ಸ್ಥಳದಲ್ಲಿದ್ದ ಗ್ರಾಮ ಲೆಕ್ಕಿಗನಿಗೆ ತಿಳಿಸಿದರು. ಸ್ಥಳಕ್ಕೆ ತಹಶೀಲ್ದಾರರು ಬರುವ ತನಕ ಪ್ರತಿಭಟನೆಯನ್ನು ಹಿಂಪಡೆಯುವದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎನ್.ರಾಜಾರಾವ್ ಹಾಗೂ ಗ್ರಾ.ಪಂ ಅಧ್ಯಕ್ಷೆ ಪ್ರೇಮಲೀಲಾ ಸಂತ್ರಸ್ತರೊಡನೆ ಸಭೆ ನಡೆಸಿ 3800 ರೂ ದೊರಕಿರುವ ಎಲ್ಲಾ ಫಲಾನುಭವಿಗಳಿಗೆ 50 ಸಾವಿರ ರೂ ಪರಿಹಾರ ಧನ ದೊರಕುವಂತೆ ಕಂದಾಯ ಇಲಾಖೆಯ ಮೂಲಕ ತಾಲೂಕು ಕೇಂದ್ರಕ್ಕೆ ಇಂದೇ ಪಟ್ಟಿಯನ್ನು ಕಳುಹಿಸುವಂತೆ ತೀರ್ಮಾನಿಸಿದರು.
ಪಟ್ಟಿಯು ತಾಲೂಕು ಕೇಂದ್ರಕ್ಕೆ ತಲಪಿದ ನಂತರ ಕ್ರಮ ಕೈಗೊಳ್ಳಲಾಗುವದು ತಹಶೀಲ್ದಾರರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸಭೆ ನಡೆಸಿ ಪರಿಹಾರ ಭರವಸೆ ನೀಡಿದ್ದು, ಈ ಹಿನ್ನೆಲೆ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.