ಗೋಣಿಕೊಪ್ಪ ವರದಿ, ಜ. 16 : ಚೆನ್ನೈ ಐಸಿಎಫ್ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಬಿ. ಡಿವಿಜನ್ ಪುರುಷರ ಹಾಕಿ ಚಾಂಪಿಯನ್‍ಶಿಪ್‍ನ ನಿರ್ಣಾಯಕ ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಹಾಕಿಕೂರ್ಗ್ ತಂಡವು ಟೂರ್ನಿಯಿಂದ ಹೊರ ಬಿದ್ದಿದೆ. ಟೂರ್ನಿಯಲ್ಲಿ ಸೋಲಿಲ್ಲದ ತಂಡವಾಗಿ ಮುನ್ನುಗ್ಗುತ್ತಿದ್ದ ತಂಡಕ್ಕೆ ನಿರ್ಣಾಯಕ ಪಂದ್ಯದಲ್ಲಿ ಅನುಭವಿಸಿದ ಡ್ರಾ ಸಾಧನೆ ಮುಳುವಾಯಿತು. 5 ಪಂದ್ಯವನ್ನಾಡಿ ಕೂರ್ಗ್ ತಂಡ 3 ಪಂದ್ಯವನ್ನು ಜಯಿಸಿ, 2 ಪಂದ್ಯವನ್ನು ಡ್ರಾ ಮಾಡಿಕೊಂಡ ಸಂತೃಪ್ತಿಯೊಂದಿಗೆ ತವರಿಗೆ ವಾಪಸ್ ಆಗಿದೆ.
ಬುಧವಾರ ಆಲ್ ಇಂಡಿಯಾ ಪೊಲೀಸ್ ತಂಡದ ವಿರುದ್ಧ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಆಡಿದ ಪಂದ್ಯದಲ್ಲಿ ಗೋಲು ದಾಖಲಿಸಲಾಗದೆ ಡ್ರಾ ಮಾಡಿಕೊಳ್ಳುವ ಮೂಲಕ ನಿರಾಸೆ ಮೂಡಿಸಿತು. ಉಭಯ ತಂಡಗಳು ಉತ್ತಮ ಹೋರಾಟ ನಡೆಸಿತ್ತಾದರೂ ಫಲಿತಾಂಶ ನೀಡಲು ಸಾಧ್ಯವಾಗದೆ ನಿರ್ಗಮಿಸಿತು. ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡ 8 ಅಂಕ ಗಳಿಸಿತ್ತು.
ಬಹುತೇಕ ಆಟಗಾರರು ಯುವಕರೇ ಪಾಲ್ಗೊಂಡಿರುವದು ತಂಡಕ್ಕೆ ಮುಳುವಾಯಿತು. ಮೊದಲೆರಡು ಪಂದ್ಯದಲ್ಲಿ 19 ಗೋಲು ದಾಖಲಿಸಿದ್ದ ತಂಡ ನಿರ್ಣಾಯಕ ಪಂದ್ಯಗಳಲ್ಲಿ ಸೋಲನುಭವಿಸಲು ಮುನ್ನಡೆ ಆಟಗಾರರ ಅನುಭವ ಕೊರತೆ ಕಾರಣವಾಗಿದೆ ಎಂದು ಹಾಕಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಟೂರ್ನಿಯಲ್ಲಿ ಹಾಕಿಕೂರ್ಗ್ ಆಟಗಾರರುಗಳಾದ ಎನ್. ಶ್ರೀಧರ್ 3, ರೋಹನ್ ತಿಮ್ಮಯ್ಯ 2, ಎಸ್. ಪಿ. ದೀಕ್ಷಿತ್ 2, ಐನಂಡ ಪೂವಣ್ಣ 3, ಪಳಂಗಿಯಂಡ ಮಾಚಯ್ಯ 4, ಡಿ. ಎಂ. ಅಚ್ಚಯ್ಯ ಹಾಗೂ ಮೋಕ್ಷಿತ್ ಉತ್ತಪ್ಪ ತಲಾ ಒಂದೊಂದು ಗೋಲು ಹೊಡೆದು ಮಿಂಚಿದ್ದರು. ತಂಡದ ವ್ಯವಸ್ಥಾಪಕರಾಗಿ ಪಳಂಗಂಡ ಲವಕುಮಾರ್, ತರಬೇತುದಾರರಾಗಿ ಬೊಳ್ಳಂಡ ರೋಶನ್ ಕಾರ್ಯನಿರ್ವಹಿಸಿದ್ದರು.