ಮಡಿಕೇರಿ, ಜ.16: ಜಮಾಯತ್ ಉಲಮಾ-ಎ-ಕರ್ನಾಟಕ, ಬೆಂಗಳೂರು ಮತ್ತು ಮಡಿಕೇರಿ ಘಟಕದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಸಮಾವೇಶ ಮತ್ತು ಸಂತ್ರಸ್ತರಿಗೆ ಸಹಾಯಧನ ವಿತರಿಸುವ ಕಾರ್ಯಕ್ರಮ ತಾ.17 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಪ್ರಮುಖ ಹಾಗೂ ನಗರಸಭಾ ಸದಸ್ಯ ಎಂ.ಕೆ. ಮನ್ಸೂರ್ ಇತ್ತೀಚಿಗೆ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಕಷ್ಟನಷ್ಟಗಳನ್ನು ಅನುಭವಿಸಿದ ಮಡಿಕೇರಿ ತಾಲೂಕಿನ ಸುಮಾರು 350 ಸಂತ್ರಸ್ತ ಕುಟುಂಬಗಳಿಗೆ ಸಂಸ್ಥೆಯು ಸಂಗ್ರಹಿಸಿದ 50 ಲಕ್ಷ ರೂ.ಗಳನ್ನು ಪರಿಹಾರ ಧನವಾಗಿ ವಿತರಿಸಲಾಗುವದೆಂದರು.

ಸಂಪೂರ್ಣ, ಭಾಗಶಃ ಮತ್ತು ಸ್ವಲ್ಪ ಹಾನಿಯಾದ ಮನೆಗಳೆಂದು ವಿಂಗಡಿಸಿ ಫಲಾನುಭವಿಗಳಿಗೆ ಪರಿಹಾರ ಧನವನ್ನು ವಿತರಿಸಲಾಗುತ್ತಿದೆ. ಎಲ್ಲಾ ಜಾತಿ ಜನಾಂಗದ ಸಂತ್ರಸ್ತರಿಗೂ ಧನ ಸಹಾಯವನ್ನು ಮಾಡಲಾಗುತ್ತಿದೆ ಎಂದು ಮನ್ಸೂರ್ ತಿಳಿಸಿದರು.

ಕಾವೇರಿ ಕಲಾಕ್ಷೇತ್ರದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಂಸದರು ಹಾಗೂ ಅಖಿಲ ಭಾರತ ಜಮಾಯತ್ ಉಲಮಾ ಎ ಯ ಪ್ರಧಾನ ಕಾರ್ಯದರ್ಶಿ ಮೌಲಾನ ಮಹಮುದ್ ಆಸದ್ ಮದನಿ ಅವರು ಪರಿಹಾರ ಧನ ವಿತರಿಸಲಿದ್ದಾರೆ.

ರಾಜ್ಯಾಧ್ಯಕ್ಷ ಮೌಲಾನ ಮುಫ್ತಿ ಇಫ್ತಖಾರ್ ಅಹಮದ್, ಉಪಾಧ್ಯಕ್ಷ ಜೈನುಲ್ಲಾ ಆಭಿದಿನ್ ರಶಾದಿ ಮುಜಹಿರಿ, ಪ್ರಧಾನಾ ಕಾರ್ಯದರ್ಶಿ ಹಜರತ್ ಮೌಲಾನ ಮುಪ್ತಿ ಸಂಶೂದ್ಧಿನ್, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ, ಮಡಿಕೇರಿ ಸಂತ ಮೈಕಲರ ಚರ್ಚ್‍ನ ಫಾದರ್ ಆಲ್‍ಪ್ರೈಡ್ ಜಾನ್ ಮೆಂಡೋನ್ಸಾ, ಮಡಿಕೇರಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯ ಅಮೀನ್ ಮೊಹಿಸಿನ್, ಪ್ರಬಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮನ್ಸೂರ್ ಮಾಹಿತಿ ನೀಡಿದರು.

ಜಮಾಯತ್ ಉಲಮಾ ಸಂಸ್ಥೆಯ ರಾಷ್ಟ್ರೀಯ ಸಮಿತಿ ಸದಸ್ಯ ನಸುರುಲ್ಲಾ ಷರೀಫ್ ಮಾತನಾಡಿ, ರಾಷ್ಟ್ರ ವ್ಯಾಪಿ ಈ ಸಂಸ್ಥೆಯಲ್ಲಿ 5 ಕೋಟಿಗೂ ಅಧಿಕ ಮಂದಿ ಸದಸ್ಯರಿದ್ದು, ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಾಮಾಜಿಕ ಕಳಕಳಿಯನ್ನು ಹೊಂದಿದೆ. ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ರಾಜ್ಯ ಘಟಕದ ಮೂಲಕ ದಿನಸಿ ಸಾಮಗ್ರಿ ಮತ್ತು ಬಟ್ಟೆಯನ್ನು ಕಳುಹಿಸಿ ಕೊಡಲಾಗಿದೆ ಎಂದು ನಸುರುಲ್ಲಾ ಷರೀಫ್ ಇದೇ ಸಂದರ್ಭ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಂ.ಐ.ಅಕ್ಬರ್ ಪಾಷ, ಹಫೀಜ್ ರಿಯಾಜ್ ಅಹ್ಮದ್, ಮೌಲಾನ ಅಬ್ದುಲ್ ಹಕೀಂ ಹಾಗೂ ಹಾಫಿಜ್ó ಇಸಾಕ್ ಅಹ್ಮದ್ ಉಪಸ್ಥಿರಿದ್ದರು.