ವೀರಾಜಪೇಟೆ, ಜ. 16: ವೀರಾಜಪೇಟೆ ಅರ್ಜಿ ಪಂಚಾಯಿತಿಯ ಪೆರುಂಬಾಡಿ ಗ್ರಾಮದ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯು ವಾರ್ಷಿಕ ಉತ್ಸವದ ಉಳಿತಾಯ ಹಣವನ್ನು ಜಲಪ್ರಳಯಕ್ಕೆ ತುತ್ತಾದ ವ್ಯಕ್ತಿಗಳಿಗೆ ನೀಡಲು ಮುಂದಾದರು, ಅದರಂತೆ ಮಕ್ಕಂದೂರು, ಉದಯಗಿರಿ ಗ್ರಾಮದಲ್ಲಿ ನಿವೇಶನ ಕಳೆದುಕೊಂಡಿರುವ 7 ಕುಟುಂಬಗಳಿಗೆ ತಲಾ ಹತ್ತು ಸಾವಿರದಂತೆ ನಗದು ನೀಡಿ ಉದಾರತೆ ಮೆರೆದಿದೆ.

ಮಕ್ಕಂದೂರು ಗ್ರಾಮದ ಶ್ರೀ ಭದ್ರಕಾಳೇಶ್ವರಿ ದೇವಾಲಯದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಗಣಪತಿ ಸೇವಾ ಸಮಿತಿಯ ಸದಸ್ಯರು ಪರಿಹಾರ ಧನವನ್ನು ವಿತರಿಸಿದರು. ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಮತ್ತು ವೀರಾಜಪೇಟೆ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್ ಮಾತನಾಡಿ, ವೀರಾಜಪೇಟೆ ನಗರ ಮತ್ತು ಗ್ರಾಮದಲ್ಲಿ ಗೌರಿ ಗಣೇಶೋತ್ಸವ ಆಚರಣೆಯು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಜಲಪ್ರಳಯಕ್ಕೆ ತುತ್ತಾದ ನಿರಾಶ್ರಿತರಿಗೆ ನೆರವಾಗಲು ಸಾರ್ವಜನಿಕ ವಂತಿಕೆ ಹಾಗೂ ಸದಸ್ಯರ ವಂತಿಕೆಯನ್ನು ಸಂಗ್ರಹಿಸಿ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಿ ಉಳಿತಾಯ ಹಣವನ್ನು ನಿವೇಶನ ಕಳೆದುಕೊಂಡಿರುವ ಕುಟುಂಬಗಳಿಗೆ ತಲಾ ಹತ್ತು ಸಾವಿರದಂತೆ ನೀಡುತಿದ್ದೇವೆ ಎಂದರು. ನಿರಾಶ್ರಿತರ ಪರವಾಗಿ ಉದಯಗಿರಿ ನಿವಾಸಿ ಬಿ.ಸಿ. ವಿಶಾಲಾಕ್ಷಿ ಧನ್ಯವಾದ ಅರ್ಪಿಸಿದರು.