ಗೋಣಿಕೊಪ್ಪ ವರದಿ, ಜ. 16: ಅಂಗನವಾಡಿ ಕೇಂದ್ರಗಳಲ್ಲಿ ಖಾಸಗಿ ಶಿಶು ವಿಹಾರದಲ್ಲಿ ದೊರಕುವ ಗುಣಮಟ್ಟದ ಪೂರಕ ವಾತಾವರಣ ನಿರ್ಮಿಸುವ ಉದ್ದೇಶದಿಂದ ರೋಟರಿ ಸಂಸ್ಥೆ ವತಿಯಿಂದ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಆಶಾಸ್ಫೂರ್ತಿ ಕಾರ್ಯಕ್ರಮಕ್ಕೆ ಇಲ್ಲಿನ ಪಟೇಲ್ ನಗರದ ಅಂಗನವಾಡಿ ಕೇಂದ್ರದಲ್ಲಿ ಚಾಲನೆ ನೀಡಲಾಯಿತು.

ಗೋಣಿಕೊಪ್ಪ ರೋಟರಿ ಸಂಸ್ಥೆ ಹಾಗೂ ಶೇರಿಂಗ್ ಅಬಾಂಡೆನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷರುಗಳಾದ ಕೊಕ್ಕಂಡ ಕಾವೇರಪ್ಪ, ಎಂ.ಜಿ. ಮೋಹನ್, ಸದಸ್ಯರುಗಳಾದ ಪ್ರಮೋದ್ ಕಾಮತ್, ನರೇನ್, ಶೇರಿಂಗ್ ಅಬಾಂಡೆನ್ಸ್ ಸಂಸ್ಥೆ ಪ್ರಮುಖರುಗಳಾದ ಪುಟ್ಟು ಉತ್ತಯ್ಯ, ರಬೀನಾ, ಜೀವನ್ ಪರಿಕರ ವಿತರಣೆ ಮೂಲಕ ಯೋಜನೆಗೆ ಚಾಲನೆ ನೀಡಿದರು. ಅಂಗನವಾಡಿ ಮಕ್ಕಳಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡುವ ಉದ್ದೇಶದಿಂದ ನೆಲಹಾಸು ಮ್ಯಾಟ್ ಹಾಗೂ ಕುಡಿಯುವ ನೀರಿನ ಫಿಲ್ಟರ್ ನೀಡಲಾಯಿತು. ಮಕ್ಕಳ ಆಟಿಕೆ, ಕುರ್ಚಿ, ಟೇಬಲ್ ವಸ್ತುಗಳನ್ನು ವಿತರಿಸಲಾಯಿತು. ರೋಟರಿ ಅಧ್ಯಕ್ಷ ಪಾರುವಂಗಡ ದಿಲನ್ ಚೆಂಗಪ್ಪ ಮಾತನಾಡಿ, ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಹೆಚ್ಚಿನ ಸ್ವಚ್ಛತೆ ಹಾಗೂ ಗುಣಮಟ್ಟದ ವಾತಾವರಣ ಮಕ್ಕಳಿಗೆ ದೊರಕುವಂತೆ ಮಾಡಲು ರೋಟರಿ ಸಂಸ್ಥೆ ಆಶಾಸ್ಫೂರ್ತಿ ಎಂಬ ಯೋಜನೆ ರೂಪಿಸಿಕೊಂಡಿದೆ. ಈ ನಿಟ್ಟಿನಲ್ಲಿ ಒಂದಷ್ಟು ಅಂಗನವಾಡಿ ಕೇಂದ್ರಗಳಿಗೆ ಖಾಸಗಿ ಗುಣಮಟ್ಟದ ವಾತಾವರಣ ಮಕ್ಕಳು ಅನುಭವಿಸುವಂತಾಗಬೇಕು. ಇದರಂತೆ ಗೋಣಿಕೊಪ್ಪ ರೋಟರಿ ಸಂಸ್ಥೆ ವತಿಯಿಂದ 3 ಅಂಗನವಾಡಿ ಕೇಂದ್ರಗಳನ್ನು ಗುರುತಿಸಿಕೊಂಡು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪರಿಕರ ವಿತರಣೆ ಮೂಲಕ ಸ್ಪಂದಿಸಲಾಗುವದು ಎಂದರು.