ಮಡಿಕೇರಿ, ಜ. 16: ಕೊಡಗಿನ 840 ಸಂತ್ರಸ್ತ ಕುಟುಂಬಗಳಿಗೆ ಸರಕಾರಿ ಪುನರ್ವಸತಿ ಯೋಜನೆಯನ್ವಯದ 840 ಮನೆಗಳ ನಿರ್ಮಾಣಕ್ಕೆ ಕನಿಷ್ಟ 2 ವರ್ಷ ಅವಧಿ ಬೇಕಾಗಬಹುದು. ಏಕೆಂದರೆ ನಿನ್ನೆ ದಿನ ಜಿಲ್ಲೆಗೆ ಬ್ಯಾರಿ ಸಮ್ಮೇಳನಕ್ಕೆ ಆಗಮಿಸಿದ್ದ ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ ತಿಂಗಳಿಗೆ 60 ಮನೆಯಂತೆ ನಿರ್ಮಾಣ ಮಾಡಲಾಗುತ್ತಿದೆ. 500 ಮನೆಗಳ ನಿರ್ಮಾಣಕ್ಕೆ ಕನಿಷ್ಟ ಒಂದು ವರ್ಷ ಅಗತ್ಯವಿದೆ ಎಂದರು. 500 ಮನೆಗಳ ನಿರ್ಮಾಣ ಬಳಿಕವಷ್ಟೆ ಅಧಿಕೃತವಾಗಿ ಮನೆಗಳನ್ನು ಉದ್ಘಾಟಿಸಿ ಸಂತ್ರಸ್ತರಿಗೆ ನೀಡಲು ಪ್ರಾರಂಭಿಸ ಲಾಗುತ್ತದೆ. ಬಳಿಕ ಉಳಿದ ಮನೆಗಳನ್ನು ನಿರ್ಮಿಸ ಲಾಗುತ್ತದೆ ಎಂದು ನುಡಿದರು. ಅಲ್ಲಿವರೆಗೆ ಸರಕಾರ ಈ ಹಿಂದೆ ಒಪ್ಪ್ಪಿದ್ದಂತೆ ಪ್ರತಿ ಸಂತ್ರಸ್ತ ಕುಟುಂಬಕ್ಕೆ ತಲಾ ರೂ. 10,000 ದಂತೆ ಮನೆ ಬಾಡಿಗೆ ನೀಡಲಾಗುತ್ತದೆ ಎಂದರು. 840 ಮನೆಗಳ ನಿರ್ಮಾಣಕ್ಕೆ 2 ವರ್ಷಗಳೇ ಬೇಕಾಗಬಹುದು ಎನ್ನುವ ಆತಂಕ ಇದೀಗ ಸಂತ್ರಸ್ತರಿಗೆ ಎದುರಾಗಿದೆ. ನಿರಾಶ್ರಿತ ಕೇಂದ್ರಗಳಿಂದಲೂ ಸಂತ್ರಸ್ತರನ್ನು ಖಾಲಿ ಮಾಡಿಸಿರುವದರಿಂದ ತಾತ್ಕಾಲಿಕವಾಗಿ ಈ ಮಂದಿ ಬಾಡಿಗೆ ಮನೆಗಳನ್ನು ಆಶ್ರಯಿಸ ಬೇಕಾಗಿದೆ.
ಪ್ರಸ್ತುತ ಸ್ಥಿತಿಯಲ್ಲಿ ಒಂದು ಮನೆಯ ನಿರ್ಮಾಣವೂ ಪೂರ್ಣ ಗೊಂಡಿಲ್ಲ. ಕಳೆದ ಡಿಸೆಂಬರ್ 7 ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ವತ: ಮಾದಾಪುರ ಬಳಿಯ ಜಂಬೂರುವಿನ 50 ಎಕರೆ ನಿವೇಶನದಲ್ಲಿ ಪುನರ್ವಸತಿಗಾಗಿ ಸಾಂಕೇತಿಕ ಅಡಿಪಾಯ ಹಾಕಿದ್ದರು. ಇದೀಗ ಒಂದು ತಿಂಗಳಿಗಿಂತ ಅಧಿಕ ಅವಧಿ ಕಳೆದಿದ್ದರೂ ಒಂದು ಮನೆಯ ನಿರ್ಮಾಣವೂ ಪೂರ್ಣಗೊಂಡಿಲ್ಲ. ಈ ಸಮಸ್ಯೆಗೆ ಇನ್ನೂ ಒತ್ತಡವೆಂಬಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾ 2 ತಿಂಗಳ ರಜೆಯಲ್ಲಿ ತೆರಳಿದ್ದಾರೆ, ವಿಶೇಷ ಡಿಸಿಯಾಗಿ ಪ್ರಾಕೃತಿಕ ವಿಕೋಪ ಸಂದರ್ಭ ಅನುಭವ ಹೊಂದಿದ್ದ ವಿಶೇಷ ಜಿಲ್ಲಾಧಿಕಾರಿ ಜಗದೀಶ್ ಅವರ ದಿಢೀರ್ ವರ್ಗಾವಣೆಯಿಂದಾಗಿ ಕೆಲಸ ಇನ್ನೂ ವಿಳಂಬವಾಗುತ್ತಿದೆ ಎನ್ನುವ ಕುರಿತು ಮಾಧ್ಯಮದವರು ಪ್ರಸ್ತಾಪಿಸಿದಾಗ ಸಚಿವ ಖಾದರ್ ಅವರು ಪ್ರತಿಕ್ರಿಯಿಸಿ “ಈ ಬಗ್ಗೆ ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಯವರೊಂದಿಗೆ ಮಾತನಾಡುತ್ತೇನೆ. ಇದರಿಂದ ಕಾಮಗಾರಿ ವಿಳಂಬ ಆಗಿಲ್ಲ.
ಪ್ರತೀ ತಿಂಗಳಿಗೆ 60 ಮನೆಗಳಂತೆ 840 ಮನೆಗಳ ನಿರ್ಮಾಣ ಮಾಡಲಾಗುತ್ತದೆ.
ಇದಕ್ಕೆ ಸಮಯ ಹಿಡಿಯುತ್ತದೆ, ಎಲ್ಲರೂ ಸಹಕರಿಸಬೇಕು. 500 ಮನೆಗಳು
(ಮೊದಲ ಪುಟದಿಂದ) ನಿರ್ಮಾಣವಾದಾಗ ಮೊದಲ ಹಂತದಲ್ಲಿ ಹಸ್ತಾಂತರ ಮಾಡಲಾಗುವದು. ಎಲ್ಲರಿಗೂ ಸೂರು ಕಲ್ಪಿಸಲು ಕನಿಷ್ಟ 12 ತಿಂಗಳು ಬೇಕಾಗುತ್ತದೆ. ಅಲ್ಲಿಯವರೆಗೆ ಪ್ರತೀ ಕುಟುಂಬಕ್ಕೆ ತಿಂಗಳಿಗೆ ರೂ. 10 ಸಾವಿರದಂತೆ ಮನೆ ಬಾಡಿಗೆ ನೀಡಲಾಗುತ್ತಿದೆ
ಕೊಡಗಿನ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಕಾಮಗಾರಿ ತಡವಾಗುತ್ತಿದೆ; ಜನರಲ್ಲಿ ಆತಂಕ ಬೇಡ ಎಂದು ಅಭಿಪ್ರಾಯಪಟ್ಟರು.
ಆದರೆ, ಪ್ರಾಯೋಗಿಕವಾಗಿ ಕಾಮಗಾರಿ ಚುರುಕುಗೊಂಡಿಲ್ಲ; ನಿಧಾನಗತಿಯಲ್ಲಿ ಸಾಗಿದೆ ಎಂದು “ಶಕ್ತಿ”ಯ ಗಮನಕ್ಕೆ ಬಂದಿದೆ. ಜಿಲ್ಲಾಡಳಿತವು ಜಿಲ್ಲೆಯ ಕರ್ಣಂಗೇರಿ, ಸಂಪಾಜೆ, ಮದೆನಾಡು, ಜಂಬೂರು ಮತ್ತು ಕುಶಾಲನಗರಗಳಲ್ಲಿ ಸುಮಾರು 95 ಎಕರೆ ನಿವೇಶನಗಳನ್ನು ಆಯ್ಕೆ ಮಾಡಿದೆ. ಈ ಪೈಕಿ ಕರ್ಣಂಗೇರಿಯಲ್ಲಿ ಮಾತ್ರ ಅಡಿಪಾಯದ ಕೆಲಸ ಮುಗಿದು ನಿರ್ಮಾಣ ಆರಂಭಗೊಂಡಿದ್ದು ಉಳಿದ ಪ್ರದೇಶಗಳಲ್ಲಿ ನಿಧಾನಗತಿ ಕಂಡುಬಂದಿದೆ.