ಸೋಮವಾರಪೇಟೆ, ಜ. 14: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಶತಮಾನೋತ್ಸವ ಸಂಭ್ರಮದಲ್ಲಿದ್ದು, ಈ ನಿಟ್ಟಿನಲ್ಲಿ 101ನೇ ಸಹಕಾರ ಸಂಭ್ರಮ-ಶತಮಾನೋತ್ಸವ 2019 ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ವರ್ಷವಿಡೀ ಕಾರ್ಯಕ್ರಮಗಳು ನಡೆಯಲಿದ್ದು, ತಾ. 15 ರಂದು (ಇಂದು) ಗೋ ಪೂಜೆಯೊಂದಿಗೆ ಶತಮಾನೋತ್ಸವ ಕಾರ್ಯಕ್ಕೆ ಚಾಲನೆ ನೀಡಲಾಗುವದು ಎಂದು ಸಂಘದ ಅಧ್ಯಕ್ಷ ಬಿ.ಡಿ. ಮಂಜುನಾಥ್ ತಿಳಿಸಿದರು.
ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 1919ರಲ್ಲಿ ಪ್ರಾರಂಭವಾದ ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಇದೀಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಸಂಘದ ಸದಸ್ಯರಿಗೆ ಅನುಕೂಲ ಕಲ್ಪಿಸುವ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.
100 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಸಹಕಾರ ಸಂಘದ ಅಭಿವೃದ್ಧಿಗೆ ಹಿರಿಯ ಅಧ್ಯಕ್ಷರುಗಳು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಸರ್ವ ಸದಸ್ಯರು ಕಾರಣಕರ್ತರಾಗಿದ್ದು, ಇದೀಗ ಸಂಘವು ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಸಂಘದಲ್ಲಿ ಸುಮಾರು 4 ಸಾವಿರ ಸದಸ್ಯರಿದ್ದು, ಎಲ್ಲಾ ಸದಸ್ಯರಿಗೂ ಒಂದಿಲ್ಲೊಂದು ಸೇವೆ ಒದಗಿಸುವ ನಿಟ್ಟಿನಲ್ಲಿ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಸಂಘದ ವ್ಯಾಪ್ತಿಗೊಳಪಡುವ ಸೋಮವಾರಪೇಟೆ ಪಟ್ಟಣ, ನೇರುಗಳಲೆ ಮತ್ತು ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದ ಮಂಜುನಾಥ್, ಎಲ್ಲಾ ಗ್ರಾಮಗಳಲ್ಲೂ ಸದಸ್ಯರಿಗೆ ಅನುಕೂಲವಾಗುವ ಸೇವೆಗಳನ್ನು ಒದಗಿಸಲಾಗುವದು ಎಂದರು.
ಸದಸ್ಯರಿಗೆ ವೈದ್ಯಕೀಯ ತಪಾಸಣೆ, ಸ್ವಚ್ಛತಾ ಕಾರ್ಯ, ಪಶು ಆರೋಗ್ಯ ತಪಾಸಣೆ, ಸಹಕಾರ ಸಂಘಗಳ ಸಾಲಗಳ ಬಗ್ಗೆ ಮಾಹಿತಿ, ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ, ಮಾಜೀ ಅಧ್ಯಕ್ಷರುಗಳ ಸ್ಮರಣಾರ್ಥ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ತಾ. 19ರಂದು ಬೇಳೂರುಬಾಣೆಯ ಹಾಲಿನ ಡೈರಿಯಲ್ಲಿ ಪಶು ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಬಳಗುಂದದಲ್ಲಿ ಸಂಘದ ವತಿಯಿಂದ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಅಲ್ಲಿ ನೂತನ ಶಾಖೆಯನ್ನು ತೆರೆಯಲಾಗುವದು. ಇದರೊಂದಿಗೆ ಗೊಬ್ಬರ ಮಿಶ್ರಣ ಯಂತ್ರವನ್ನು ಅಳವಡಿಸುವ ಚಿಂತನೆಯೂ ನಡೆದಿದೆ ಎಂದ ಅವರು, ಶತಮಾನೋತ್ಸವ ಕಾರ್ಯಕ್ರಮಗಳಿಗೆ ತಾ. 15 ರಂದು ಗೋಪೂಜೆ ನಡೆಸುವ ಮೂಲಕ ಚಾಲನೆ ನೀಡಲಾಗುವದು. ಸಂಘದ ಆವರಣದಲ್ಲಿ ಷೇರು ಬಾಂಡ್, ಗುರುತಿನ ಚೀಟಿ ವಿತರಣೆ ಕಾರ್ಯ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಜಿ. ಸುರೇಶ್, ನಿರ್ದೇಶಕರುಗಳಾದ ದಾಸಪ್ಪ, ಲಕ್ಷ್ಮೀಕಾಂತ್, ಹೆಚ್.ಕೆ. ಮಾದಪ್ಪ, ಬಿ.ಎಂ. ಸುರೇಶ್ ಅವರುಗಳು ಉಪಸ್ಥಿತರಿದ್ದರು.