ಮಡಿಕೇರಿ, ಜ. 16: ಬ್ಯಾರಿ ಸಾಹಿತ್ಯ ಅಕಾಡೆಮಿ, ಕೊಡಗು ಬ್ಯಾರಿಸ್ ವೆಲ್‍ಫೇರ್ ಟ್ರಸ್ಟ್‍ನ ವತಿಯಿಂದ ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಬ್ಯಾರಿ ಸಮಾವೇಶದ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಭಾಷೆ, ಸಂಸ್ಕøತಿಯನ್ನು ನಾಶ ಮಾಡಿದರೆ ಸಮುದಾಯವೇ ನಾಶವಾಗುತ್ತದೆ ಆದ್ದರಿಂದ ಭಾಷೆ - ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕೆಂದರು. ಬ್ಯಾರಿ ಭಾಷೆಗೆ ತನ್ನದೇ ಆದ ಲಿಪಿ ಇಲ್ಲದಿದ್ದರೂ ಕೂಡ 1400 ವರ್ಷಗಳಿಂದಲೂ ತನ್ನತನವನ್ನು ಉಳಿಸಿಕೊಂಡು ಬಂದಿದೆ ಎಂದರೆ ಅದರಲ್ಲಿ ಹಿರಿಯರ ಶ್ರಮ ಸಾಕಷ್ಟಿದೆ ಎನ್ನುವದು ತಿಳಿದು ಬರುತ್ತದೆ. ಹಾಗಾಗಿ ಇವೆಲ್ಲವನ್ನೂ ಪರಿಗಣಿಸಿ ಬ್ಯಾರಿ ಸಮುದಾಯದ ಯುವಕರು ಸಿಗುವ ಅವಕಾಶಗಳನ್ನು ಸದು ಪಯೋಗಪಡಿಸಿಕೊಂಡು ಸೌಹಾರ್ದತೆ ಹಾಗೂ ಒಗ್ಗಟ್ಟಿನಿಂದ ಮುನ್ನಡೆಯ ಬೇಕು. ಹಿರಿಯರ ಪ್ರಯತ್ನ ಹಾಗೂ ಶ್ರಮದ ಫಲವಾಗಿ ಬ್ಯಾರಿ ಅಕಾಡೆಮಿ ರಚನೆಯಾಗಿದೆ. ಇದೀಗ ಅಕಾಡೆಮಿ ಯ ವತಿಯಿಂದ ಸಮುದಾಯ ಬಾಂಧವರಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದು ಇದರ ಪ್ರಯೋಜನವನ್ನು ಯುವ ಸಮೂಹ ಪಡೆದುಕೊಂಡು ಸಾಹಿತ್ಯ, ಶೈಕ್ಷಣಿಕ ಹಾಗೂ ಎಲ್ಲಾ ರಂಗದಲ್ಲೂ ಮುಂದೆ ಬರಲು ಶ್ರಮಿಸಬೇಕು ಎಂದರು.

ಮಡಿಕೇರಿಯಲ್ಲಿ ಬ್ಯಾರಿ ಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಪ್ರತಿಯೊಬ್ಬರೂ ತ್ಯಾಗ, ಪ್ರೀತಿ, ವಿಶ್ವಾಸ, ಸೋದರತೆಯನ್ನು ಬೆಳೆಸಿಕೊಳ್ಳಬೇಕು. ಬ್ಯಾರಿ ಎಂಬ ಪದ ಒಗ್ಗಟ್ಟಿನ ಸಂಕೇತವಾಗಬೇಕೆ ಹೊರತು ಬಿಕ್ಕಟ್ಟಿನ ಪದವಾಗಬಾರದು. ಯಾರೂ ಕೂಡ ಕೋಮುವಾದಿಗಳಾಗ ಬಾರದೆಂದು ಸಲಹೆ ನೀಡಿದರು. ಬ್ಯಾರಿ ಕವಿತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮಹಮ್ಮದ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಬ್ಯಾರಿ ವೆಲೆಫೇರ್ ಟ್ರಸ್ಟ್ ಅಚ್ಚುಕಟ್ಟಾಗಿ, ಶಿಸ್ತಿನಿಂದ ಕಾರ್ಯಕ್ರಮ ರೂಪಿಸಿದೆ. ಇನ್ನು ಸಮಾವೇಶದ ಪ್ರಯುಕ್ತ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿ ಸೌಹಾರ್ದತೆಯನ್ನು ಮೂಡುವಂತೆ ಮಾಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಬ್ಯಾರಿ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಬಿ.ಎ.ಷಂಶುದ್ದೀನ್ ಮಾತನಾಡಿ, ಬ್ಯಾರಿ ಸಮುದಾಯದ ಮಕ್ಕಳು ಮುಂಬರುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದ್ದು ಇದನ್ನು ಸಮುದಾಯ ಭಾಂದವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಮಾವೇಶದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಎ.ಹಸನಬ್ಬ, ಕರ್ನಾಟಕ ಗೌಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಂ, ಪ್ರಮುಖರಾದ ಮನ್ಸೂರ್ ಅಹ್ಮದ್, ಎಂ.ಸಿ.ನಾಣಯ್ಯ, ಮೊಹಮ್ಮದ್, ಪೆಮ್ಮಂಡ ಪೊನ್ನಪ ಸೇರಿದಂತೆ ಮತ್ತಿತರ ಗಣ್ಯರು ಹಾಜರಿದ್ದರು.

ಕವಿಗೋಷ್ಠಿ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗು ಬ್ಯಾರಿಸ್ ವೆಲ್‍ಫೇರ್ ಟ್ರಸ್ಟ್‍ನ ಸಹಯೋಗದೊಂದಿಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬ್ಯಾರಿ ಸಮಾವೇಶದ ಅಂಗವಾಗಿ ಕವಿಗೋಷ್ಠಿ ಜರುಗಿತು. ಕಾರ್ಯಕ್ರಮವನ್ನುದ್ದೇಶಿಸಿ ಉದ್ಘಾಟನಾ ಭಾಷಣ ಮಾಡಿದ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಕೇಶವ್ ಕಾಮತ್, ಕನ್ನಡ ಭಾಷೆಯ ಲಿಪಿಯನ್ನು ಬಳಸಿಕೊಂಡ ಹಲವು ಭಾಷೆಗಳು ನಮ್ಮಲಿದೆ. ಅಂತಹ ಭಾಷೆಗಳನ್ನು ಒಟ್ಟುಗೂಡಿಸಿ ಬ್ಯಾರಿ ಸಮಾವೇಶ ಕಾರ್ಯಕ್ರಮದಲ್ಲಿ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿರುವದು ಸಂತಸದ ವಿಚಾರ ಎಂದರು.

ಕಾರ್ಯಕ್ರಮದ ಕುರಿತು ಆಶಯ ನುಡಿಗಳನ್ನಾಡಿದ ಕರ್ನಾಟಕ ಬ್ಯಾರಿ ಅಕಾಡೆಮಿ ಸದಸ್ಯ ಕುತ್ತೆತ್ತೂರು ಅಬ್ದುಲ್ ರೆಹಮಾನ್, ಇಂದು ನಾವು ಭಾಷೆಯ ಮೂಲಕ ಸಾಮರಸ್ಯವನ್ನು ಕಂಡುಕೊಳ್ಳುತ್ತಿರುವದು ಮೆಚ್ಚುವಂತಹ ವಿಚಾರವಾಗಿದ್ದು, ಹಲವಾರು ಭಾಷಿಕರನ್ನು ಒಟ್ಟು ಸೇರಿಸಿ ಒಂದೇ ವೇದಿಕೆಯಲ್ಲಿ ಕವಿಗೋಷ್ಠಿ ಆಯೋಜಿಸಿರುವದು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಕನ್ನಡ, ಬ್ಯಾರಿ, ಕೊಡವ, ತುಳು, ಅರೆಭಾಷೆ, ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಕವಿಗೋಷ್ಠಿ ನಡೆಯಿತು.