ಮಡಿಕೇರಿ, ಜ. 16: ಕೊಡಗಿನಲ್ಲಿ ಪ್ರಕೃತಿ ವಿಕೋಪ ನಡೆದು 5 ತಿಂಗಳು ಕಳೆದರೂ, ವಿಕೋಪದಿಂದಾದ ನೋವುಗಳು ಕೆಲವರಿಗೆ ಇನ್ನೂ ಮಾಸದಂತಾ ಗಿದೆ. ಪ್ರಕೃತಿ ವಿಕೋಪ ನಡೆಯುವ ಮೊದಲು ತನ್ನ ಅಮ್ಮನ ಹೆಸರಿ ನಲ್ಲಿದ್ದ ತೋಟ ಹಾಗೂ ಗದ್ದೆಯಲ್ಲಿ ರೈತರಾಗಿ ದುಡಿಯುತ್ತಿದ್ದ ಎನ್.ಬಿ. ಚರಣ್ (38), ವಿಕೋಪದ ನಂತರ ಎಲ್ಲವನ್ನೂ ಕಳೆದುಕೊಂಡು, ಸಾಲದಿಂದ ಹಾಗೂ ಮನೆಯಿಲ್ಲದೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂಲತಃ ಜೋಡುಪಾಲ ಗ್ರಾಮದ ಚರಣ್ ತಾ. 10 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ಅಸ್ವಸ್ಥರಾಗಿದ್ದ ಅವರನ್ನು ಮೊದಲು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿ ನಂತರ ಮೈಸೂರಿಗೆ ವರ್ಗಾಯಿಸಲಾಯಿ ತಾದರೂ ತಾ. 12 ರಂದು ವಿಧಿವಶರಾದರು.

2ನೇ ಮೊಣ್ಣಂಗೇರಿಯಲ್ಲಿ ಚರಣ್ ರೈತರಾಗಿ ದುಡಿಯುತ್ತಿದ್ದರು. ಅವರು ತನ್ನ ತಾಯಿ, ತಮ್ಮ ಹಾಗೂ ಚಿಕ್ಕಮ್ಮನ ಜೊತೆ ಜೋಡುಪಾಲ ದಲ್ಲಿದ್ದ ಮನೆಯಲ್ಲಿ ವಾಸವಾಗಿದ್ದರು. ‘ಜೋಡು ಪಾಲದಲ್ಲಿದ್ದ ಈ ಮನೆ ನಮ್ಮ ಅಜ್ಜಿಗೆ ಸೇರಿತ್ತು. ಅವರ ಮರಣದ ನಂತರ ಈ ಮನೆ ಚರಣ್, ನನ್ನ ಚಿಕ್ಕಮ್ಮ ಹಾಗೂ ನನ್ನ ಹೆಸರಿಗೆ ಸೇರಿತು,’ ಎಂದು ಚರಣ್‍ನ ಸಹೋದರ ಯತೀಶ್ ವಿವರಿಸುತ್ತಾರೆ.

ಪ್ರಕೃತಿ ವಿಕೋಪ ಚರಣ್‍ನ ವಾಸದ ಮನೆ ನಾಶಮಾಡಿತಲ್ಲದೆ, ಅವರು ಡುಡಿಯುತ್ತಿದ್ದ ಹೊಲವನ್ನೂ ನುಂಗಿ ಹಾಕಿತು. ಇದಾದ ನಂತರ, ಕೆಲಸವಿಲ್ಲದೆ, ಸಾಲದ ಭಾರ ಹೆಚ್ಚಾಗುತ್ತಾ ಹೋಯಿತು. ‘ನನ್ನ ಅಣ್ಣ ಸಹಕಾರ ಸಂಘದಿಂದ ಸಾಲ ಮಾಡಿದ್ದನಲ್ಲದೆ, ಇತರರಿಂದ ಕೂಡ ಸಾಲ ಮಾಡಿದ್ದ. ಅಲ್ಲದೆ ಚಿನ್ನದ ಸಾಲದ ಹೊರೆಯೂ ಅವನ ಮೇಲಿತ್ತು,’ ಎಂದು ಯತೀಶ್ ಮಾಹಿತಿ ನೀಡುತ್ತಾರೆ.

ಇಷ್ಟೇ ಅಲ್ಲದೆ, ಚರಣ್‍ನ ತಾಯಿಗೆ ಮೂರು ತಿಂಗಳ ಹಿಂದೆ ಹೃದಯಾಘಾತವಾಯಿತು. ಅವರ ಚಿಕಿತ್ಸೆಗೆ ಮೈಸೂರಿಗೆ ತೆರಳಬೇಕಾಗಿ ಬಂತು. ಔಷಧಿಗಳ ಖರ್ಚು ಸಾಲದ ಹೊರೆಗೆ ಸೇರಿಕೊಂಡಿತು. ಇದಲ್ಲದೆ, ಸಂಪಾಜೆ ಪರಿಹಾರ ಕೇಂದ್ರದಲ್ಲಿದ್ದ ಚರಣ್, ಇದು ಮುಚ್ಚಿದ ನಂತರ ಮಡಿಕೇರಿಯಲ್ಲಿ ತಮ್ಮ ನೆಂಟರ ಮನೆಯಲ್ಲಿದ್ದರು. ಸರಕಾರದಿಂದ ಪರಿಹಾರ ದೊರೆತರೂ, ಕಳೆದು ಕೊಂಡದ್ದನ್ನು ಮತ್ತೆ ಪಡೆಯಲಾರದ ದುಃಖ ಚರಣ್‍ರವರನ್ನು ಕಾಡುತ್ತಿತೆಂದು ಯತೀಶ್ ದುಃಖಿಸುತ್ತಾರೆ. ಹೀಗೆ, ಮನೆಯಿಲ್ಲದೆ, ಸರಕಾರದಿಂದ ದೊರಕಬೇಕಾದ ಮನೆಯ ಕೆಲಸ ಇನ್ನೂ ಪ್ರಾರಂಭವಾಗದೆ, ಕೆಲಸವಿಲ್ಲದೆ ಬೇಸತ್ತು ಚರಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

‘ನಮಗೆ ಸರಕಾರದಿಂದ ಬರಬೇಕಾದ ಹಣ ದೊರೆತಿದೆ,’ ಎಂದು ಮಾಹಿತಿ ನೀಡಿದ ಯತೀಶ್, ‘ಇಂದು ಡಿವೈಎಸ್‍ಪಿ, ಎಸಿ ಹಾಗೂ ತಹಶೀಲ್ದಾರ್‍ರವರು ನಮ್ಮನ್ನು ಭೇಟಿಯಾಗಿ, ಮನೆಯನ್ನು ಮೊದಲ ಆದ್ಯತೆ ಮೇರೆಗೆ ನಿರ್ಮಿಸಲಾಗು ವದೆಂದು ಆಶ್ವಾಸನೆ ನೀಡಿದ್ದಾರೆ. ಇದಲ್ಲದೆ, ಸಾಲವನ್ನು ತೀರಿಸಲು ಸಹಾಯ ಮಾಡುವದಾಗಿ ತಿಳಿಸಿದ್ದಾರೆ, ಎಂದು ಭರವಸೆ ಹೊಂದಿದ್ದಾರೆ.

-ಪ್ರಜ್ಞಾ ಜಿ.ಆರ್.