ಮಡಿಕೇರಿ, ಜ. 14: ಬ್ಯಾರಿ ಭಾಷೆಯ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಇದೀಗ ಜಿಲ್ಲೆಯಲ್ಲಿ ‘ಬ್ಯಾರಿ ಎಲ್ತ್ ಗಾರೊ ಕೂಟ’ ಅಸ್ತಿತ್ವಕ್ಕೆ ಬಂದಿದೆ.

ಕುಶಾಲನಗರದ ಹೊಟೇಲ್ ಲೀ ಪಾರ್ಚೂನ್ ಸಭಾಂಗಣದಲ್ಲಿ ಶಿಕ್ಷಕ ಬರೆಹಗಾರ ಇ. ಸುಲೇಮಾನ್ ಶೇಖ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಸಮಾನ ಮನಸ್ಕರು ಹೊಸ ಸಂಘಟನೆಯನ್ನು ರಚಿಸಿದ್ದು, ಜಿಲ್ಲೆಯಲ್ಲಿ ಬ್ಯಾರಿ ಭಾಷೆಯ ಸಾಹಿತ್ಯಕ್ಕೆ ಒತ್ತು ನೀಡುವ ಮೂಲಕ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬ್ಯಾರಿ ಭಾಷೆಯ ಕಥೆ, ಕವನ, ಲೇಖನಗಳನ್ನೊಳಗೊಂಡ ಕೃತಿಗಳನ್ನು ಪ್ರತಿ ಮಾಸ ಹೊರ ತರುವದು, ಬ್ಯಾರಿ ಜನಾಂಗದವರಿಗೂ, ಭಾಷಾಭಿಮಾನಿಗಳಿಗೂ ಭಾಷೆಯ ಕಲಿಕಾ ಕಮ್ಮಟಗಳನ್ನು ಏರ್ಪಡಿಸುವದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬ್ಯಾರಿ ಸಾಧಕರನ್ನು, ಪ್ರತಿಭಾವಂತರನ್ನು ಗುರುತಿಸಿ ವಾರ್ಷಿಕ ಸಮಾರಂಭಗಳಲ್ಲಿ ಗೌರವಿಸುವದು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯು ಸಭೆ ನಿರ್ಧರಿಸಿತು.

ಕೂಟದ ಸ್ಥಾಪಕ ಅಧ್ಯಕ್ಷ ಶಿಕ್ಷಕ, ಲೇಖಕ ಇ. ಸುಲೇಮಾನ್ ಶೇಖ್ ಆಯ್ಕೆಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲನಗರದ ಫೈಝಲ್ ಆಯ್ಕೆಗೊಂಡಿದ್ದು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹಸನಬ್ಬ ಮಾದಾಪುರ, ಅಬ್ಬಾಸ್ ಬ್ಯಾಡಗೊಟ್ಟ, ಹಾಜಿರಾಬಿ ಸುಂಟಿಕೊಪ್ಪ, ಬಿ.ಐ. ಅನ್ಸಾರ್ ಕೂಡಿಗೆ, ಅಬ್ದುಲ್ ಖಾದರ್ ಮಡಿಕೇರಿ ಆಯ್ಕೆಗೊಂಡಿದ್ದಾರೆ.