ಗೋಣಿಕೊಪ್ಪಲು, ಜ. 16: ಗೋಣಿಕೊಪ್ಪಲುವಿನ ಏಕಮುಖ ಸಂಚಾರದಿಂದ ವಾಹನ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ಆರಂಭಿಸಿದ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಬೈಪಾಸ್ ರಸ್ತೆಯ ಅಗಲೀಕರಣಕ್ಕೆ ಚಾಲನೆ ನೀಡಿದರು.
ಶಾಸಕರ, ಜಿಲ್ಲಾ ಪಂಚಾಯಿತಿ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಗಿದೆ. ಮುಖ್ಯ ರಸ್ತೆಯ ಪೆಟ್ರೋಲ್ ಬಂಕ್ ಸಮೀಪದ ಬೈಪಾಸ್ ರಸ್ತೆಯ ಎರಡು ಭಾಗದ ಜಾಗವನ್ನು ಸಮತಟ್ಟು ಮಾಡುವ ಮೂಲಕ ಹಾಗೂ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಬೈಪಾಸ್ ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಅನುಕೂಲ ಮಾಡಿ ಕೊಡುವ ಹಿನ್ನೆಲೆ ತುರ್ತು ಕೆಲಸವನ್ನು ಆರಂಭಿಸಿದ್ದಾರೆ.
ಮುಂಜಾನೆಯಿಂದಲೆ ಕಾಮಗಾರಿ ಆರಂಭಗೊಂಡಿದ್ದು, ವಿದ್ಯುತ್ ಇಲಾಖೆಯ ಇಂಜಿನಿಯರ್ ಕೃಷ್ಣ ಕುಮಾರ್ ಅವರನ್ನು ಸ್ಥಳಕ್ಕೆ ಬರಮಾಡಿಕೊಂಡ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ವಾಹನ ಸಂಚಾರಕ್ಕೆ ತೊಡಕಾಗುವ ಹಾಗೂ ವಿದ್ಯುತ್ ಕಂಬವನ್ನು ತೆರವುಗೊಳಿಸಲು ನಿರ್ದೇಶನ ನೀಡಿದರು. ಕಾರ್ಯ ಪ್ರವೃತ್ತರಾದ ಚೆಸ್ಕಾಂನ ಸಿಬ್ಬಂದಿಗಳು ಕಂಬಗಳನ್ನು ತೆರವುಗೊಳಿಸುವ ಕಾರ್ಯನಿರ್ವಹಿಸಿದರು.
ಬೈಪಾಸ್ ರಸ್ತೆಯಲ್ಲಿಯೇ ಎರಡು ಕಡೆಯಿಂದ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಹಿನ್ನೆಲೆ ಈ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ, ಪ್ರಮುಖರಾದ ಕಿರಣ್, ಜಪ್ಪು ಸುಬ್ಬಯ್ಯ ಉಪಸ್ಥಿತರಿದ್ದರು.