ಸೋಮವಾರಪೇಟೆ, ಜ. 14: ನಂದಿ ಮರದ ಸೈಜ್‍ಗಳನ್ನು ಅಕ್ರಮವಾಗಿ ಸಾಗಾಟಗೊಳಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖಾ ಅಧಿಕಾರಿಗಳು, ಆರೋಪಿ ಸಹಿತ ಅಂದಾಜು ರೂ. 5 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ತಾಕೇರಿ ಗ್ರಾಮದಿಂದ ಪಟ್ಟಣದ ಕಡೆಗೆ ಐಷರ್ ವಾಹನದಲ್ಲಿ (ಕೆ.ಎ.12-9035) ಅಕ್ರಮವಾಗಿ ನಂದಿ ಮರದ ಸೈಜ್‍ಗಳನ್ನು ಸಾಗಾಟಗೊಳಿಸುತ್ತಿದ್ದ ಚೌಡ್ಲು ಗ್ರಾಮದ ಚಂದ್ರ ಎಂಬಾತನನ್ನು ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿದ್ದಾರೆ. ಇದರೊಂದಿಗೆ ವಾಹನ, ಮರದ ಸೈಜುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ. ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಹದೇವ ನಾಯಕ್ ನೇತೃತ್ವದಲ್ಲಿ, ಅರಣ್ಯ ವೀಕ್ಷಕ ಶ್ರೀಕಾಂತ್, ಮೋಹನ್, ಚಾಲಕ ಚಂದ್ರನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.