ಕೂಡಿಗೆ, ಜ. 16: ಬಾಣವಾರದ ಜೇನು ಕುರುಬ ಹಾಡಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಕಾಡ್ಗಿಚ್ಚಿನಿಂದ ಅರಣ್ಯವನ್ನು ರಕ್ಷಿಸುವ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮಿಕಾಂತ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಹದೇವ ನಾಯಕ ಹಾಡಿಯ ಜನರಲ್ಲಿ ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆ ಕುರಿತು ಅರಿವು ಮೂಡಿಸಿದರು. ಅರಣ್ಯಕ್ಕೆ ಬೆಂಕಿ ತಗಲದಂತೆ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳ, ಅರಣ್ಯ ಸಂಪತ್ತು ನಾಶದಿಂದ ಉಂಟಾಗುವ ಅನಾನುಕೂಲತೆಗಳ ಬಗ್ಗೆ ವಿವರಿಸಿದರು.
ಹಾಡಿಯ ಮುಖಂಡ ಧರ್ಮ ಮಾತನಾಡಿ, ಅರಣ್ಯಕ್ಕೆ ಬೆಂಕಿ ಬೇಳದಂತೆ ಹಾಡಿಯ ಜನರು ಎಚ್ಚರವಹಿಸುತ್ತೇವೆ. ಅರಣ್ಯ ಸಂಪತ್ತು ರಕ್ಷಣೆಯ ಜವಾಬ್ದಾರಿ ನಿಭಾಯಿಸುತ್ತೇವೆ ಎಂದರು. ಈ ಸಂದರ್ಭ ಅರಣ್ಯ ರಕ್ಷಕ ಹೆಚ್.ಪಿ. ರಾಜಣ್ಣ, ಸಿಬ್ಬಂದಿಗಳು ಮತ್ತು ಹಾಡಿಯ ಜನರು ಇದ್ದರು.