ಮಡಿಕೇರಿ, ಜ. 13: ಮಡಿಕೇರಿ ನಗರ ಪ್ರವೇಶಿಸಿದ ತಕ್ಷಣ ಮಂಗಳೂರು ರಸ್ತೆಯ ವೃತ್ತದಲ್ಲಿರುವ ಜನರಲ್ ತಿಮ್ಮಯ್ಯ ಪ್ರತಿಮೆ ದಾಟಿ ಖಾಸಗಿ ಬಸ್ ನಿಲ್ದಾಣದತ್ತ ಸಾಗಿದೊಡನೆ ಎದುರಾಗುವದು ಹುತಾತ್ಮ ಯೋಧ ಮೇಜರ್ ಮಂಗೇರಿರ ಮುತ್ತಣ್ಣ ಅವರ ಪ್ರತಿಮೆ.

ಈ ವೃತ್ತದಿಂದ ರಾಜಾಸೀಟು ರಸ್ತೆಯಲ್ಲಿ ಕಳೆದೆರಡು ದಿನಗಳಿಂದ ಕೊಡಗು ಪ್ರವಾಸಿ ಉತ್ಸವದ ಸಂಭ್ರಮ ಮನೆ ಮಾಡಿದೆ. ಈ ನಡುವೆ ಎದುರಾದ ಜನವರಿ 12ರ ದಿನಾಂಕ ಮೇಜರ್ ಮುತ್ತಣ್ಣ ಅವರು ದೇಶಕ್ಕಾಗಿ ಹುತಾತ್ಮರಾದ ದಿನವಾಗಿದೆ. ಬಹುಶಃ ಈ ದಿನ ಯಾರಿಗೂ ನೆನಪಿಲ್ಲವೇನೋ... ಯೋಧನ ಪ್ರತಿಮೆಯ ಆವರಣದ ವ್ಯಾಪ್ತಿಯಲ್ಲೇ ಹತ್ತಾರು ಕಲರವಗಳು ನಡೆಯುತಿತ್ತು. ಆದರೂ ತಾ. 12 ರಂದು ಇವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ದಿನ ಎಂಬದು ಅರಿವಾಗಿದ್ದಂತಿರಲಿಲ್ಲ. ಈ ನಡುವೆ ಮಡಿಕೇರಿ ನಗರದಲ್ಲಿರುವ ಸೇನಾ ಕುಟುಂಬಕ್ಕೆ ಸೇರಿರುವ ಮಲಚೀರ ಅಚ್ಚಯ್ಯ ಅವರ ಸೊಸೆ ಸೀಮಾ ಅವರು ಹುತಾತ್ಮ ಯೋಧನನ್ನು ನೆನೆಸಿ ಪ್ರತಿಮೆಗೆ ಪುಷ್ಪ ಗುಚ್ಚವಿರಿಸಿ ಗೌರವ ಸಲ್ಲಿಸಿರುವದು ವಿಶೇಷವಾಗಿದೆ.

ಸೀಮಾ ಅವರಿಗೆ ಈ ದಿನವನ್ನು ನೆನಪಿಸಿದ್ದು, ಹೈದರಾಬಾದ್‍ನಲ್ಲಿ ಕೇಂದ್ರ ಸರಕಾರದ ಅಧೀನದ ಫೋರೆನ್ಸಿಕ್ ಲ್ಯಾಬ್‍ನಲ್ಲಿ ಉದ್ಯೋಗದಲ್ಲಿರುವ ಮುತ್ತಣ್ಣ ಅವರ ಪತ್ನಿ ರೀನಾ ಅವರ ಸಹೋದರಿ. ರೇಣು ಅವರು, ಇವರು ಕೊಡಗಿಗೆ ಆಗಮಿಸುವ ಸಂದರ್ಭದಲ್ಲಿ ಪ್ರತಿಮೆಗೆ ಪುಷ್ಪಾರ್ಚನೆಗೈದು ನಮನ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಪೊನ್ನಂಪೇಟೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕೀತಿಯಂಡ ಕುಟುಂಬಕ್ಕೆ ಸೇರಿದವರಾದ ರೇಣು ಆ ಕುಟುಂಬದಿಂದ ಮಡಿಕೇರಿಗೆ ಮದುವೆಯಾಗಿರುವ ಸೀಮಾ ಅವರಿಗೆ ಜನವರಿ 12 ರ ದಿನವನ್ನು ತಿಳಿಸಿ ಇವರು ಮಡಿಕೇರಿಯಲ್ಲೇ ಇರುವದ ರಿಂದ ಪ್ರತಿಮೆಗೆ ಪುಷ್ಪವಿರಿಸಿ ಗೌರವ ಸಲ್ಲಿಸಲು ಕೇಳಿ ಕೊಂಡಿದ್ದರಲ್ಲದೆ, ನಿನ್ನೆ ಬೆಳಿಗ್ಗೆಯೂ ಮೊಬೈಲ್ ಕರೆ ಮಾಡಿ ನೆನಪಿಸಿದ್ದಾರೆ.

ಇದರಂತೆ ಪ್ರವಾಸಿ ಉತ್ಸವ ಒಂದೆಡೆ ನಡೆಯುತ್ತಿದ್ದರೆ, ಇತ್ತ ಸೀಮಾ ಅವರು ತಮ್ಮ ಪತಿ ಪ್ರವೀಣ್ ರೊಂದಿಗೆ ನಿನ್ನೆ ಪ್ರತಿಮೆ ಇರುವ ಸ್ಥಳಕ್ಕೆ ತೆರಳಿ ಪುಷ್ಪಗುಚ್ಚವಿರಿಸಿ ದೇಶಕ್ಕಾಗಿ ಹುತಾತ್ಮರಾದ ವೀರಾ ಸೇನಾನಿಗೆ ಗೌರವ ನಮನ ಸಲ್ಲಿಸಿ ತಮ್ಮಷ್ಟಕ್ಕೆ ಮರಳಿದ್ದಾರೆ.

ಮುತ್ತಣ್ಣರದ್ದು ವೀರಗಾಥೆ

ಮೇಜರ್ ಮಂಗೇರಿರ ಮುತ್ತಣ್ಣ ಅವರು ಹುತಾತ್ಮರಾಗಿ ನಿನ್ನೆಗೆ 19 ವರುಷ. ಅವರು ಹುತಾತ್ಮರಾದದ್ದು, ಕೆಚ್ಚೆದೆಯ ಹೋರಾಟದ ನಡುವೆ ಎಂಬದು ಸ್ಮರಣೀಯ 2000ನೇ ಇಸವಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ವ್ಯಾಪ್ತಿಯಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಉಗ್ರಗಾಮಿಗಳು ಕಾಶ್ಮೀರ ಹೆದ್ದಾರಿಯ ಸೇನಾ ನೆಲೆ ಹಾಗೂ ಜನವಸತಿ ಪ್ರದೇಶಕ್ಕೆ ನುಗ್ಗಿದ್ದರು. ಮಾರಕಾಯುಧ, ಬಾಂಬ್, ಗ್ರೆನೇಡ್ ಸಹಿತವಾಗಿ ದಿಢೀರ್ ಧಾಳಿ ನಡೆದಿತ್ತು. ಈ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಭಾರೀ ಹೋರಾಟಕ್ಕೆ ಮುಂದಾದ ಮುತ್ತಣ್ಣ ಅವರು ಹಲವು ಭಾರತೀಯ ಸೈನಿಕರನ್ನು, ನಾಗರಿಕರನ್ನು ರಕ್ಷಿಸಿ ತಾವು ದೇಶಕ್ಕಾಗಿ ಹುತಾತ್ಮರಾಗಿದ್ದರು. ಈ ಸಾಹಸದ ಕಾರ್ಯಾಚರಣೆಗೆ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಬಿರುದನ್ನು ನೀಡಲಾಗಿತ್ತು.

ಮೇಜರ್ ಮುತ್ತಣ್ಣ ತೋರಿದ ಸಾಹಸಕ್ಕಾಗಿ ಅವರ ಗೌರವಾರ್ಥ ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಜರ್ ಎಂ.ಸಿ. ಮುತ್ತಣ್ಣ ಮಾರ್ಗ್, ಮುತ್ತಣ್ಣ ಆರ್ಮಿ ಗುಡ್‍ವಿಲ್ ಸ್ಕೂಲ್, ಪಬ್ಲಿಕ್‍ಸ್ಕೂಲ್ ಹಾಗೂ ಅಲ್ಲಿನ ಸಮುದಾಯ ಭವನವೊಂದಕ್ಕೆ ಅವರ ಹೆಸರನ್ನು ಇಡಲಾಗಿದೆ. ಹುತಾತ್ಮರಾದ ಸಂದರ್ಭ ಇವರು ಪತ್ನಿ ರೀನಾ ಹಾಗೂ ಒಂದೂವರೆ ವರ್ಷದ ಮಗುವನ್ನು ಅಗಲಿದ್ದರು. ತವರು ಜಿಲ್ಲೆ ಕೊಡಗಿನಲ್ಲಿ ಮಡಿಕೇರಿ ನಗರಸಭೆಯ ಮುಂಭಾಗದಲ್ಲಿ 2010ರಲ್ಲಿ ಇವರ ಪ್ರತಿಮೆ ಸ್ಥಾಪಿತವಾಗಿದೆ.

- ಶಶಿ ಸೋಮಯ್ಯ