ಕುಶಾಲನಗರ, ಜ. 13: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಒಡೆತನದ ಕಟ್ಟಡವೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿರುವದು ಕಂಡುಬಂದಿದೆ. ನಗರದ ಅಂಚೆ ಕಚೇರಿ ಮುಂಭಾಗದಲ್ಲಿರುವ ಹಳೆಯ ಕಟ್ಟಡವೊಂದು ಕಳೆದ ಕೆಲವು ವರ್ಷಗಳಿಂದ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದ್ದು ಸುತ್ತಮುತ್ತಲೂ ತ್ಯಾಜ್ಯಗಳಿಂದ ತುಂಬಿದೆ. ಈ ಬಗ್ಗೆ ಸ್ಥಳೀಯ ಆಡಳಿತ ಅಥವಾ ಇತರ ಇಲಾಖೆಗಳಾಗಲಿ ಸರಕಾರಿ ಕಟ್ಟಡದ ನಿರ್ವಹಣೆಗೆ ಪ್ರಯತ್ನ ಮಾಡದಿರುವದು ಗೋಚರಿಸಿದೆ.
ಈ ಹಿಂದೆ ಈ ಕಟ್ಟಡದಲ್ಲಿ ಪೊಲೀಸ್ ಇಲಾಖೆಯ ಕಚೇರಿ ಕಾರ್ಯನಿರ್ವಹಿಸುತ್ತಿದ್ದು ಕಳೆದ ಕೆಲವು ವರ್ಷಗಳಿಂದ ಪಾಳು ಬಿದ್ದಿರುವದು ಕಾಣಬಹುದು. ಕೆಲವು ಖಾಸಗಿ ವ್ಯಕ್ತಿಗಳು ಇದನ್ನು ಒತ್ತುವರಿ ಮಾಡುವ ಸಾಧ್ಯತೆಯಿದ್ದು ಕೂಡಲೇ ಸರಕಾರಿ ಕಟ್ಟಡ ಹಾಗೂ ಕೋಟಿಗಟ್ಟಲೆ ಬೆಲೆಬಾಳುವ ಜಾಗವನ್ನು ಸಂರಕ್ಷಣೆ ಮಾಡಬೇಕೆಂದು ಸ್ಥಳೀಯ ಪ್ರಮುಖರಾದ ಗಿರೀಶ್ ಕೋರಿದ್ದಾರೆ.