*ಗೋಣಿಕೊಪ್ಪಲು, ಜ. 13: ನೃತ್ಯ, ಹಿಂದುಸ್ಥಾನಿ ಮತ್ತು ಕರ್ನಾಟಕ ಸಂಗೀತ ಗೀತಗಾಯನ, ವಯಲಿನ್, ಕೊಳಲು ವಾದನ, ಗೀಗಿಪದ, ಗಿರಿಜನ ನೃತ್ಯ, ಕಂಸಾಳೆ, ಡೊಳ್ಳು ಕುಣಿತ ಮೊದಲಾದ ಸಾಂಸ್ಕøತಿಕ ಕಲೆಗಳು ಪೊನ್ನಂಪೇಟೆಯಲ್ಲಿ ರಂಜಿಸಿದವು.

ಕನ್ನಡ ಮತ್ತು ಸಂಸ್ಕøತಿಕ ಇಲಾಖೆ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಸೌರಭದಲ್ಲಿ ಮೈಸೂರಿನ ಅರಮನೆ ಕಲಾವಿದರು ನುಡಿಸಿದ ಸುಶ್ರಾವ್ಯ ವಯಲಿನ್ ವಾದನ ಪ್ರೇಕ್ಷಕರಿಗೆ ಮುದನೀಡಿತು. ಇದೇ ಕಲಾವಿದರ ಕೊಳಲು ವಾದನವು ಇಂಪಾಗಿತ್ತು. ಆನಂತರ ಬೆಂಗಳೂರಿನ ನಾಟ್ಯಾಲಯ ನೃತ್ಯ ಶಾಲೆಯ ನೃತ್ಯ ಮನಮೋಹಕವಾಗಿತ್ತು.

ಮೈಸೂರಿನ ಡೊಳ್ಳುಕುಣಿತ ಕಲಾವಿದರು ನೋಡುಗರನ್ನು ರೋಮಾಂಚನಗೊಳಿಸಿದರು. ಕಿವಿಗಡಚಿಕ್ಕುವ ಶಬ್ದ ಹಾಗೂ ಕುಣಿತದ ಮೂಲಕ ಕುಪ್ಪಳಿಸಿದರು. ಮತ್ತೊಂದು ಕಡೆ ಕಂಸಾಳೆ ಕಲಾವಿದರು ತಮ್ಮ ತಾಳಮೇಳದೊಂದಿಗೆ ಸುಂದರವಾಗಿ ನಿರ್ಮಿಸಿದರು.

ಪೊನ್ನಂಪೇಟೆಯ ಸಂಗೀತ ಕಲಾವಿದೆ ನಿರ್ಮಲಾ ಬೋಪಣ್ಣ ಅವರ ಗೀತಗಾಯನ, ವೀರಾಜಪೇಟೆಯ ಬಿ.ಎಸ್. ದಿಲಿಕುಮಾರ್ ಅವರ ಶಾಸ್ತ್ರಿಯ ಸಂಗೀತ ಸುಶ್ರಾವ್ಯವಾಗಿತ್ತು. ಪೊನ್ನಂಪೇಟೆ ಜೈ ಭೀಮ್ ಯುವಕ ಸಂಘದ ಗಿರೀಶ್ ತಂಡದವರ ಜಾನಪದ ಗೀತೆ ನೃತ್ಯ ಹಾಗೂ ಗೀಗಿಪದ, ಷಡಕ್ಷರಯ್ಯ ಅವರ ವಚನಗಾಯನ ಅತ್ಯುತ್ತಮವಾಗಿ ಮೂಡಿಬಂತು. ನಾಣಚಿಯ ಅಮ್ಮಾಳಮ್ಮ ಗಿರಿಜನರ ನೃತ್ಯ ಮನಮೋಹಕವಾಗಿತ್ತು.

ವೇದಿಕೆಯಲ್ಲಿ ಮೂಡಿಬಂದ ಈ ಎಲ್ಲಾ ವೈವಿಧ್ಯಮಯ ಕಾರ್ಯಕ್ರಮವನ್ನು ಆಸ್ವಾದಿಸಿದ ಪ್ರೇಕ್ಷಕ ವರ್ಗ ಚಪ್ಪಾಳೆಗಳ ಸುರಿಮಳೆ ಮೂಲಕ ಕುಣಿತು ಕುಪ್ಪಳಿಸಿತು.

ಆರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಸಾಯಿಶಂಕರ ವಿದ್ಯಾಸಂಸ್ಥೆ ಅಧ್ಯಕ್ಷ ಕೋಳೆರ ಝರು ಗಣಪತಿ ಪ್ರತಿಯೊಂದು ಪ್ರದೇಶಕ್ಕೂ ಅವರದ್ದೇ ಆದ ಕಲೆ ಮತ್ತು ಸಂಸ್ಕøತಿಗಳಿವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಾಡುತ್ತಿರುವ ಕೆಲಸ ಶ್ಲಾಘನೀಯ. ಕಲೆ ಮತ್ತು ಸಂಸ್ಕøತಿಯನ್ನು ಮೈಗೂಡಿಸಿಕೊಂಡು ಮುಂದುವರಿಯಬೇಕು ಎಂದು ಹೇಳಿದರು.

ಉಪನ್ಯಾಸಕ ಡಾ. ಜೆ. ಸೋಮಣ್ಣ ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಪ್ರೀತಿಸುವ ಸಮಾಜದ ಹೃದಯ ವಂತಿಕೆಯಿಂದ ಕೂಡಿರುತ್ತದೆ. ಸಂಗೀತಕ್ಕೆ ಮನಸ್ಸನ್ನು ಮೃದುಗೊಳಿಸುವ ಶಕ್ತಿಯಿದೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ತಮ್ಮ ಆಸಕ್ತಿಗೆ ಅನುಗುಣವಾದ ಕಲೆಯನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತಾ ಗಣೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ದರ್ಶನಾ, ಮಂಜುನಾಥ್ ಮಣಜೂರು ಹಾಜರಿದ್ದರು. -ಎನ್.ಎನ್. ದಿನೇಶ್