ಗೋಣಿಕೊಪ್ಪಲು, ಜ. 12 : ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಕಳೆದ 15 ದಿನಗಳಿಂದ ಏಕ ಮುಖ ಸಂಚಾರ ಆರಂಭಿಸಿದ್ದರಿಂದ ನಗರದ ನೂರಾರು ವರ್ತಕರಿಗೆ ವ್ಯಾಪಾರವಿಲ್ಲದೆ ಪರದಾಡುವ ಪರಿಸ್ಥಿತಿಯನ್ನು ಮನಗಂಡು ವ್ಯಾಪಾರಸ್ಥರು, ವರ್ತಕರು, ನಾಗರಿಕರು ಒಟ್ಟಾಗಿ ಸೇರಿ ತಾ.17ರಂದು ತಮ್ಮ, ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಂಜಾನೆಯಿಂದ ಸಂಜೆಯವರೆಗೆ ಬಂದ್ ಮಾಡುವ ಮೂಲಕ ಬಸ್ ನಿಲ್ದಾಣದಲ್ಲಿ ಧರಣಿ ನಿರ್ಧಾರಕ್ಕೆ ಬಂದಿರುವ ವರ್ತಕರು ಸಂಬಂಧಪಟ್ಟ ಇಲಾಖೆ ಮೇಲೆ ಒತ್ತಡ ಹೇರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಏಕಮುಖ ಸಂಚಾರ ಮುಂದುವರಿದರೆ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬಸ್ ನಿಲ್ದಾಣದಲ್ಲಿ ಒಂದು ದಿನ ಧರಣಿ ನಿರ್ಧಾರಕ್ಕೆ ಬಂದಿದ್ದಾರೆ.
ಏಕ ಮುಖ ಸಂಚಾರ ರದ್ದುಗೊಳಿಸುವಂತೆ ಒಂದು ಗಂಟೆಯ ಮಟ್ಟಿಗೆ ನಗರದಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಸಾಂಕೇತಿಕವಾಗಿ ಪ್ರತಿಭಟಿಸಿದ್ದೇವೆ. ಅಧಿಕಾರಿಗಳಿಗೆ 5 ದಿನ ಗಡುವು ನೀಡಲಾಗಿತ್ತು. ಆದರೆ ವರ್ತಕರ ಕಷ್ಟಗಳಿಗೆ ಸಂಬಂಧಪಟ್ಟವರು ಸ್ಪಂಧಿಸಲಿಲ್ಲ. ಅನಿವಾರ್ಯವಾಗಿ ನಾವು ಪ್ರತಿಭಟನೆಯ ಹಾದಿ ಹಿಡಿದಿದ್ದೇವೆ ಎಂದು ಮಚ್ಚಮಾಡ ಅನೀಶ್‍ಮಾದಪ್ಪ ತಿಳಿಸಿದರು.
ಸಭೆ ಕರೆಯುತ್ತೇನೆ: ಏಕಮುಖ ಸಂಚಾರದ ಬಗ್ಗೆ ಇನ್ನು ನಾಲ್ಕು ದಿನದಲ್ಲಿ ಪರವಿರೋಧವಿರುವ ಪ್ರಮುಖರನ್ನು ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುತ್ತೇನೆ. ಎಲ್ಲಾರು ಒಟ್ಟಾಗಿ ಸಾಧಕ ಬಾಧಕಗಳ ಬಗ್ಗೆ ತೀರ್ಮಾನಕ್ಕೆ ಬದ್ದರಾಗೋಣ ಎಲ್ಲವೂ ಸಮಾಜದ ಒಳಿತಿಗಾಗಿ ಕೆಲಸ ಮಾಡೋಣ ಈಗಾಗಲೇ ಬೈಪಾಸ್ ರಸ್ತೆಯ ಅಗಲೀಕರಣಕ್ಕೆ ಜಿ.ಪಂ.ನಿಂದ ಅನುದಾನ ಬಿಡುಗಡೆ ಮಾಡಿದ್ದೇನೆ. ಕೆಲಸ ಕಾಮಗಾರಿ ಪ್ರಾರಂಭವಾಗಲಿದೆ ನಂತರ ಪರಿಸ್ಥಿತಿ ಸರಿಹೋಗಬಹುದು ಎಂಬ ನಂಬಿಕೆಯಿದೆ ಎಂದು ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ತಿಳಿಸಿದ್ದಾರೆ.
ಯಾರಿಗೂ ಅನ್ಯಾಯವಾಗದಂತೆ ಏಕಮುಖ ಸಂಚಾರ ವ್ಯವಸ್ಥೆ ಮಾಡುತ್ತೇವೆ. ಕೆಲವೇ ದಿನಗಳಲ್ಲಿ ಏಕ ಮುಖ ಸಂಚಾರದ ಮಾರ್ಗಗಳನ್ನು ಬದಲಾಯಿಸಿ ಪ್ರಯೋಗ ನಡೆಸಲಿದ್ದೇವೆ. ಒಮ್ಮತ್ತದ ತೀರ್ಮಾಕ್ಕೆ ಬರಲು ಹಲವು ಸುತ್ತಿನ ಸಭೆಗಳನ್ನು ನಡೆಸುತ್ತೇವೆ. ಜನತೆ ಗಾಬರಿ ಪಡುವ ಅವಶ್ಯಕತೆ ಇಲ್ಲ. ಪೊಲೀಸ್ ಇಲಾಖೆ ಸದಾ ಜನತೆಯ ಪರವಾಗಿಯೇ ಇರುತ್ತದೆ ಎಂದು ನಿರೀಕ್ಷಕ ದಿವಾಕರ್ ಪ್ರತಿಕ್ರಿಯಿಸಿದ್ದಾರೆ.