ಮಡಿಕೇರಿ, ಜ. 13: ಏಳ್‍ನಾಡ್ ಕೊಡವ ಸಂಘದ ಸ್ಥಾಪಕ ಅಧ್ಯಕ್ಷನೆಂದು ಹೇಳಿ ಕೊಂಡು ಯು.ಎಂ. ಮುದ್ದಯ್ಯ ಅವರು ಸಂಘದ ಪದಾಧಿಕಾರಿಗಳ ವಿರುದ್ಧ ಮಾಡಿರುವ ಹಣ ದುರುಪಯೋಗದ ಆರೋಪ ಆಧಾರ ರಹಿತ ಮತ್ತು ಸತ್ಯಕ್ಕೆ ದೂರವಾಗಿದೆ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಟಿ.ಕೆ. ಚಂಗಪ್ಪ ಹಾಗೂ ಇತರ ಪದಾಧಿಕಾರಿಗಳು ಯು.ಎಂ. ಮುದ್ದಯ್ಯ ಅವರ ಹೇಳಿಕೆಗಳನ್ನು ಖಂಡಿಸುವದಾಗಿ ತಿಳಿಸಿದರು.

ಅತಿವೃಷ್ಟಿ ಹಾನಿಯಿಂದ ಜೀವ ಹಾಗೂ ಮನೆ ಕಳೆದುಕೊಂಡ ಏಳುನಾಡಿನ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವದಕ್ಕಾಗಿ ಸಂಘದ ಮೂಲಕ ದೇಣಿಗೆ ಸಂಗ್ರಹಿಸಿರುವದು ನಿಜ, ಆದರೆ ಯಾವದೇ ದುರುಪಯೋಗವಾಗಿಲ್ಲವೆಂದು ಸ್ಪಷ್ಟಪಡಿಸಿದರು.

ಸಂಘವು ಇಲ್ಲಿಯವರೆಗೆ ಸುಮಾರು 10 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿ ಇದೆ. ಆದರೂ ವಿನಾಕಾರಣ ಸಂಘದ ಪದಾಧಿಕಾರಿಗಳ ವಿರುದ್ಧ ಬೆಂಗಳೂರು ನಗರ ಪಶ್ಚಿಮ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹಣ ದುರುಪಯೋಗದ ಆರೋಪ ಹೊರಿಸಿ ದೂರು ನೀಡಲಾಗಿದೆ. ವಿಚಾರಣೆ ನಡೆಸಿದ ಪೊಲೀಸರು ದೇಣಿಗೆ ಸಂಗ್ರಹದ ಎಲ್ಲಾ ದಾಖಲೆಗಳು ಸರಿಯಾಗಿರುವ ಕಾರಣ ಮುದ್ದಯ್ಯ ಅವರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ವಿಚಲಿತಗೊಂಡ ಮುದ್ದಯ್ಯ ಅವರು ಸುದ್ದಿಗೋಷ್ಠಿ ನಡೆಸಿ ನಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ಟೀಕಿಸಿದರು.

ಮುದ್ದಯ್ಯ ಅವರು ಪಶ್ಚಿಮ ಘಟ್ಟದ ಹಿಂದುಳಿದ ಗ್ರಾಮಗಳ ಅಭಿವೃದ್ಧಿ ವೇದಿಕೆಯ ಸ್ವಯಂ ಘೋಷಿತ ಅಧ್ಯಕ್ಷರಾಗಿದ್ದಾರೆಯೇ ಹೊರತು ಏಳ್‍ನಾಡ್ ಕೊಡವ ಸಂಘದ ಸ್ಥಾಪಕರಲ್ಲವೆಂದು ಚಂಗಪ್ಪ ಹೇಳಿದರು.

ಮುದ್ದಯ್ಯ ಅವರ ವರ್ತನೆ ಬಗ್ಗೆ ಗ್ರಾಮದ ಜನರೇ ಬೇಸತ್ತಿದ್ದಾರೆ.

ಬೆಂಗಳೂರು ಕೊಡವ ಸಮಾಜವೇ ಇವರ ಸದಸ್ಯತ್ವವನ್ನು ರದ್ದು ಪಡಿಸಿದೆ. ಆದರೂ ಪಾಠ ಕಲಿಯದ ಮುದ್ದಯ್ಯ ಅವರು ಸುಳ್ಳು ದೂರುಗಳನ್ನು ದಾಖಲಿಸಿ ತೊಂದರೆ ನೀಡುವ ಚಾಳಿಯನ್ನು ಮುಂದುವರೆಸಿದ್ದಾರೆ ಎಂದು ಪ್ರಮುಖರು ಆರೋಪಿಸಿದರು.

ಏಳ್‍ನಾಡ್ ಕೊಡವ ಸಂಘ ನೋಂದಾಯಿತ ಸಂಸ್ಥೆಯಾಗಿದ್ದು, ಎಲ್ಲಾ ಲೆಕ್ಕಪತ್ರಗಳು ಹಾಗೂ ದಾಖಲೆಗಳು ಪಾರದರ್ಶಕವಾಗಿವೆ. ಅತಿವೃಷ್ಟಿ ಹಾನಿ ಸಂತ್ರಸ್ತರಿಗಾಗಿ ಸಂಗ್ರಹಿಸಿದ ಹಣಕ್ಕೆ ರಶೀದಿ ನೀಡಿಲ್ಲವೆಂದು ಯಾರಾದರು ಒಬ್ಬರು ಸಾಕ್ಷಿ ಸಹಿತ ಸಾಬೀತು ಪಡಿಸಿದರೆ ದುರುಪಯೋಗದ ಸಂಪೂರ್ಣ ಹೊಣೆಯನ್ನು ಸಂಘ ಹೊರಲಿದೆ ಎಂದು ಪ್ರಮುಖರು ಸವಾಲು ಹಾಕಿದರು.

ಜೀವ ಮತ್ತು ಮನೆ ಕಳೆದುಕೊಂಡ ಕುಟುಂಬಗಳಿಗೆ ಮಾತ್ರ ಆರ್ಥಿಕ ನೆರವು ನೀಡಲಾಗುತ್ತಿದೆ. ಆರು ಏಕರೆ ಜಮೀನು ಕಳೆದುಕೊಂಡದಕ್ಕಾಗಿ ಪರಿಹಾರ ಕೋರಿ ಪುಷ್ಪಪೂಣಚ್ಚ ಅವರು ಸಲ್ಲಿಸಿದ ಅರ್ಜಿಯನ್ನು ಇದೇ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಾ.26 ರಂದು ಸಂತ್ರಸ್ತರಿಗೆ ಚೆಕ್

ಅತಿವೃಷ್ಟಿ ಅನಾಹುತದ ನಂತರ ಸಂಘವು ಪ್ರಾಣಹಾನಿ ಮತ್ತು ಮನೆಹಾನಿಯ ಕುಟುಂಬಗಳ ಸರ್ವೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಮುಂದಾಯಿತು. ಸುಮಾರು 50 ರಿಂದ 60 ಅರ್ಹ ಕುಟುಂಬಗಳಿಗೆ ಇದೇ ಜ.26 ರಂದು ಮಾದಾಪುರದ ಕೊಡವ ಸಮಾಜದಲ್ಲಿ ಪರಿಹಾರದ ಚೆಕ್‍ಗಳನ್ನು ವಿತರಿಸಲಾಗುವದು. ಅಲ್ಲದೆ ಸ್ವಲ್ಪ ಮೊತ್ತದ ಹಣವನ್ನು ಪೊನ್ನಂಪೇಟೆಯ ಶ್ರೀಸಾಯಿ ಶಂಕರ ವಿದ್ಯಾಸಂಸ್ಥೆಗೂ ನೀಡಲಾಗುವದು. ದೂರವಾಣಿ ಕರೆ ಮೂಲಕ ಆಹ್ವಾನ ನೀಡುವ ಸಂತ್ರಸ್ತ ಕುಟುಂಬಗಳು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚೆಕ್ ಸ್ವೀಕರಿಸಬೇಕೆಂದು ಟಿ.ಕೆ. ಚಂಗಪ್ಪ ಮನವಿ ಮಾಡಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಸಿ. ಬೋಪಯ್ಯ, ಕಾರ್ಯದರ್ಶಿ ಐ.ಜೆ. ಭೀಮಯ್ಯ, ಜಂಟಿ ಖಜಾಂಚಿ ಬಿ.ಬಿ. ಗಣೇಶ್ ಹಾಗೂ ಹಣಕಾಸು ವಿಭಾಗದ ಸಂಚಾಲಕ ಎಸ್.ಕೆ. ಸೋಮಯ್ಯ ಉಪಸ್ಥಿತರಿದ್ದರು.