ಸೋಮವಾರಪೇಟೆಯಲ್ಲಿ ಬಾಪು ಗಾಂಧಿ-ಗಾಂಧಿ ಬಾಪು ರಂಗರೂಪಕ
ಸೋಮವಾರಪೇಟೆ, ಜ. 13: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಆಶಯದಂತೆ ಸತ್ಯ ಮತ್ತು ಅಹಿಂಸೆಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣತೊಡ ಬೇಕು ಎಂದು ತಾಲೂಕು ತಹಶೀಲ್ದಾರ್ ಪಿ.ಎಸ್. ಮಹೇಶ್ ಕರೆ ನೀಡಿದರು.
ಜಿ.ಪಂ., ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಇಲ್ಲಿನ ಸಂತ ಜೋಸೆಫರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮಾಗಾಂಧಿ ಕುರಿತಾದ ‘ಬಾಪು ಗಾಂಧಿ-ಗಾಂಧಿ ಬಾಪು’ ರಂಗ ರೂಪಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾನ್ಯ ವ್ಯಕ್ತಿಯಾಗಿ ಜನಿಸಿದ ಗಾಂಧೀಜಿಯವರು ತಮ್ಮ ಕ್ರಾಂತಿಕಾರಕ ಚಿಂತನೆಗಳ ಮೂಲಕ ಮಹಾತ್ಮ ಸ್ಥಾನ ಅಲಂಕರಿಸಿದರು. ವರ್ಣ ಭೇದ ನೀತಿಯ ವಿರುದ್ಧ ಹೋರಾಟಕ್ಕಿಳಿದ ಗಾಂಧೀಜಿ, ನಂತರ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವವರೆಗೂ ವಿಶ್ರಮಿಸಲಿಲ್ಲ ಎಂದು ಸ್ಮರಿಸಿದ ತಹಶೀಲ್ದಾರ್, ಪ್ರಸ್ತುತ ಭಯೋತ್ಪಾದನೆಗೆ ಕಡಿವಾಣ ಹಾಕುವ ಮೂಲಕ ಅಹಿಂಸೆಯ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು. ಸ್ವಚ್ಛ ಭಾರತ್ ಮಿಷನ್ನ ಯಶಸ್ಸಿಗೆ ಎಲ್ಲರೂ ಕೈಜೋಡಿಸುವ ಮೂಲಕ, ಗಾಂಧೀಜಿ ಅವರ ಆಶಯದಂತೆ ಸ್ವಚ್ಛ ಭಾರತ ನಿರ್ಮಾಣ ವಾಗಬೇಕಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಗಾಂಧೀಜಿ ಎಂದಿಗೂ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ದೇಶ ವಾಸಿಗಳ ಬಗ್ಗೆ ಚಿಂತಿಸುತ್ತಿದ್ದ ಮಹಾತ್ಮರ ಜೀವನದ ತತ್ವಾದರ್ಶಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿದೆ ಎಂದರು. ವಕೀಲ ಭರತ್ ಭೀಮಯ್ಯ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಮಹಾನ್ ನಾಯಕರ ಜೀವನವನ್ನು ತಿಳಿದುಕೊಳ್ಳಬೇಕು. ಅವರ ಮಾರ್ಗದರ್ಶನದಂತೆ ನಡೆಯಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಪ್ರಾಂಶುಪಾಲ ಫಾ. ಟೆನ್ನಿ ಕುರಿಯನ್ ಮಾತನಾಡಿ, ಶಾಂತಿಗಾಗಿ ದುಡಿಯುವವರು ದೇವರ ಮಕ್ಕಳಾಗುತ್ತಾರೆ. ಅಂತಹ ಮಹಾನ್ ಸ್ಥಾನಕ್ಕೆ ಗಾಂಧೀಜಿ ತಲುಪಿದ್ದರು ಎಂದು ಶ್ಲಾಘಿಸಿದರು. ಕಾರ್ಯಕ್ರಮ ಸಂಯೋಜಕ ಸಜನ್ ಮಂದಣ್ಣ, ನೃತ್ಯ ರೂಪಕ ತಂಡದ ಮಧ್ವರಾಜ್, ಕಾಲೇಜು ಪ್ರಾಂಶುಪಾಲ ಎ. ಥೋಮಸ್, ಉಪನ್ಯಾಸಕಿ ಜ್ಯೋತಿ ಅವರುಗಳು ಉಪಸ್ಥಿತರಿದ್ದರು.