ಮಡಿಕೇರಿ, ಜ. 12: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲಾ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಸಿಗುತ್ತಿದ್ದು, ಅರ್ಹರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತೈಲ ಕಂಪೆನಿಯ ವ್ಯವಸ್ಥಾಪಕ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಮಹೇಂದ್ರ ಡೋಂಗ್ರೆ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಹಿಂದೆ ಉಜ್ವಲ ಯೋಜನೆಯಡಿಯಲ್ಲಿ 2011ರ ಗಣತಿ ಪ್ರಕಾರ ತಯಾರಿಸಿದ ಪಟ್ಟಿಯಲ್ಲಿದ್ದ ಅರ್ಹ ಮಹಿಳೆಯರಿಗೆ ಹಾಗೂ ಉಜ್ವಲ ಯೋಜನೆಯ ಮೊದಲ ಹಂತದಲ್ಲಿ (ಪಿಎಮ್‍ಯುವೈ-1) ಎಲ್ಲಾ ಎಸ್.ಸಿ ಹಾಗೂ ಎಸ್.ಟಿ ವರ್ಗದ ಮಹಿಳೆಯರಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿತ್ತು. ಇದೀಗ ಉಜ್ವಲ ಯೋಜನೆಯ ಎರಡನೇ ಹಂತದಲ್ಲಿ (ಪಿಎಮ್‍ಯುವೈ-2) ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲಾ ಬಡಕುಟುಂಬದ ಮಹಿಳೆಯರಿಗೆ ಉಚಿತ ಅನಿಲ ಸಂಪರ್ಕ ನೀಡಲಾಗುವದು ಎಂದು ಹೇಳಿದ್ದಾರೆ. ಅನಿಲ ಸಂಪರ್ಕ ಇಲ್ಲದ ಕುಟುಂಬ ತಮ್ಮ ಬಿಪಿಎಲ್ ಪಡಿತರ ಚೀಟಿ, ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಭಾವಚಿತ್ರದೊಂದಿಗೆ ಹತ್ತಿರದ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲೆಯಲ್ಲಿ ಶೇ.100 ರಷ್ಟು ಅಡುಗೆ ಅನಿಲದ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದ್ದು, ಅರ್ಹರು ಇದರ ಲಾಭ ಪಡೆಯುವಂತೆ ಮಹೇಂದ್ರ ಡೋಂಗ್ರೆ ಮನವಿ ಮಾಡಿದ್ದಾರೆ.