ಮಡಿಕೇರಿ, ಜ.11 : ಕೊಡವ ಸಮಾಜಗಳ ಮೂಲಕ ಮಳೆಹಾನಿ ಸಂತ್ರಸ್ತರಿಗಾಗಿ ಸಂಗ್ರಹಿಸಿರುವ ಪರಿಹಾರ ಧನದ ಮೊತ್ತವನ್ನು ಇದೇ ಫೆ.2 ರಂದು ಅರ್ಹ ಫಲಾನುಭವಿಗಳಿಗೆ ವಿತರಿಸಲು ಕೊಡವ ಸಮಾಜಗಳ ಒಕ್ಕೂಟದ ಮಾಸಿಕ ಸಭೆ ನಿರ್ಧರಿಸಿದೆ
ಬಾಳುಗೋಡಿನ ಕೊಡವ ಸಮಾಜದ ಕಟ್ಟಡದಲ್ಲಿ ಒಕ್ಕೂಟದ ಅಧ್ಯಕ್ಷÀ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಅತಿವೃಷ್ಟಿ ಹಾನಿಯಿಂದ ಉಂಟಾದ ಸಂಕಷ್ಟದ ಕ್ಷಣಗಳನ್ನು ಮೆಲುಕು ಹಾಕಿದ ಪ್ರಮುಖರು ಫೆ.2 ರಂದು ಬಾಳುಗೋಡು ಕೊಡವ ಸಮಾಜದಲ್ಲಿ ಸಮಾವೇಶ ನಡೆಸಿ ಸಂತ್ರಸ್ತರಿಗೆ ಪರಿಹಾರ ಧನವನ್ನು ವಿತರಿಸುವ ಕುರಿತು ನಿರ್ಧರಿಸಿದರು.
ಪ್ರಾಕೃತಿಕ ವಿಕೋಪದ ಹಿನ್ನೆಲೆ ಕೊಡಗು ಜಿಲ್ಲೆಗಾಗಿಯೇ ಅನೇಕ ದಾನಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣವನ್ನು ನೀಡಿದ್ದಾರೆ. ಈ ರೀತಿಯಲ್ಲಿ ಸಂಗ್ರಹವಾದ ಹಣದ ಮೊತ್ತವೆಷ್ಟು ಎಂಬದನ್ನು ಸರ್ಕಾರ ಬಹಿರಂಗ ಪಡಿಸಬೇಕು ಮತ್ತು ಸಂಗ್ರಹವಾದ ಹಣವನ್ನು ಕೊಡಗಿನ ಪರಿಹಾರ ಕಾರ್ಯಗಳಿಗೆ ಶೀಘ್ರ ವಿನಿಯೋಗಿಸಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.
ಮುಂದಿನ ವರ್ಷ ನಡೆಯುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ಸಂದರ್ಭ ಹಾಕಿ ಮೈದಾನದಲ್ಲಿ ಸ್ಟೇಡಿಯಂ ನಿರ್ಮಿಸಲು ರಾಜ್ಯದ ಮುಖ್ಯಮಂತ್ರಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ಬಳಿ ನಿಯೋಗ ತೆರಳಿ, ಧನ ಸಹಾಯ ಕೋರುವ ಕುರಿತು ನಿರ್ಧರಿಸಲಾಯಿತು.
ಸಭೆಯಲ್ಲಿ ಕೊಡವ ಸಮಾಜಗಳ ಅಧ್ಯಕ್ಷರು, ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರು, ದಾನಿಸದಸ್ಯರು, ವಕ್ಕ ಸದಸ್ಯರು ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಫೆ.2 ರಂದು ನಡೆಯುವ ಸಮಾವೇಶದಲ್ಲಿ ಎಲ್ಲಾ ಕೊಡವ ಸಮಾಜದ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ದಾನಿ ಸದಸ್ಯರು ಹಾಗೂ ವಕ್ಕ ಸದಸ್ಯರು ಹಾಜರಿದ್ದು, ಸಂತ್ರಸ್ತರಿಗೆ ಪರಿಹಾರ ಧನ ವಿತರಿಸಬೇಕೆಂದು ಅಧ್ಯಕ್ಷÀ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮನವಿ ಮಾಡಿದರು.
ಒಕ್ಕೂಟದ ಉಪಾಧ್ಯಕ್ಷರು ಹಾಗೂ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ.ನಾಣಯ್ಯ, ಸದಸ್ಯ ಮೇರಿಯಂಡ ಸಿ.ನಾಣಯ್ಯ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಜಂಟಿ ಕಾರ್ಯದರ್ಶಿ ಕೋದಂಡ ಸನ್ನು ಉತ್ತಪ್ಪ, ಮಾಜಿ ಅಧ್ಯಕ್ಷÀ ಮಲ್ಲೇಂಗಡ ದಾದ ಬೆಳ್ಯಪ್ಪ, ಪೊಮ್ಮಕ್ಕಡ ವಿಭಾಗದ ಅಧ್ಯಕ್ಷರಾದ ಚಿರಿಯಪಂಡ ಇಮ್ಮಿ ಉತ್ತಪ್ಪ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಪ್ರಾರ್ಥಿಸಿ, ವಾಟೇರಿರ ಶಂಕರಿ ಪೂವಯ್ಯ ವಂದಿಸಿದರು.