ಶನಿವಾರಸಂತೆ, ಜ. 11: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹೆಚ್.ಆರ್.ಪಿ. ಯೋಜನೆಯಡಿ ತಾಲೂಕು ಪಂಚಾಯಿತಿ ಅನುದಾನ ರೂ. 14,71,124 ವೆಚ್ಚದಲ್ಲಿ ರಸ್ತೆ, ಚರಂಡಿ, ತಡೆಗೋಡೆ, ಸಮುದಾಯ ಭವನಕ್ಕೆ ಅಡುಗೆ ಮನೆ ನಿರ್ಮಾಣ ಕಾಮಗಾರಿ ಹಾಗೂ ರಂಗಮಂದಿರ, ಶೌಚಾಲಯ ದುರಸ್ತಿ ಇತ್ಯಾದಿಗಳಿಗೆ ಮಾಜಿ ಸಚಿವ ಬಿ.ಎ. ಜೀವಿಜಯ ಭೂಮಿಪೂಜೆ ನೆರವೇರಿಸಿದರು.
ಬೆಂಬಳೂರು ಗ್ರಾಮದಲ್ಲಿ ರೂ. 1,05,000 ವೆಚ್ಚದಲ್ಲಿ ಸೋಲಿಂಗ್ ರಸ್ತೆ ನಿರ್ಮಾಣ, ಬ್ಯಾಡಗೊಟ್ಟ ಪಂಚಾಯಿತಿ ಹಾರೋಹಳ್ಳಿ ಗ್ರಾಮದ ಕೆರೆ ಏರಿಯಿಂದ ರೂ. 1.20 ಲಕ್ಷ ವೆಚ್ಚದಲ್ಲಿ ಜಲ್ಲಿ ರಸ್ತೆ ನಿರ್ಮಾಣ, ಹಂಪಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೂ. 1 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ, ಕೊಡ್ಲಿಪೇಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರೂ. 60 ಸಾವಿರ ವೆಚ್ಚದ ರಂಗಮಂದಿರ ದುರಸ್ತಿ, ದೊಡ್ಡಕೊಡ್ಲಿ ಗ್ರಾಮದ ಪ್ರಾಥಮಿಕ ಶಾಲೆ ದುರಸ್ತಿ ಹಾಗೂ ಕಲ್ಲಾರೆ ಗ್ರಾಮದಲ್ಲಿ ರೂ. 90 ಸಾವಿರ ವೆಚ್ಚದಲ್ಲಿ ಚರಂಡಿ ನಿರ್ಮಾಣ, ಕಲ್ಲಳ್ಳಿ ಗ್ರಾಮದಲ್ಲಿ ರೂ. 70 ಸಾವಿರ ವೆಚ್ಚದಲ್ಲಿ ಸಾರ್ವಜನಿಕ ಜ್ಞಾನ ಮಂದಿರ ದುರಸ್ತಿಗೆ ಭೂಮಿಪೂಜೆ ನೆರವೇರಿಸಿದರು.
ಕೊಡ್ಲಿಪೇಟೆಯ 1ನೇ ವಿಭಾಗದಲ್ಲಿ ರೂ. 1,01,124 ವೆಚ್ಚದಲ್ಲಿ ಸಾರ್ವಜನಿಕ ಚರಂಡಿ, ಕಲ್ಲಾರೆ ಗ್ರಾಮದಲ್ಲಿ ರೂ. 1,20,000 ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್‍ಲೈನ್, ವಿವಿಧ ಗ್ರಾಮಗಳಲ್ಲಿ ರೂ. 4,97,000 ವೆಚ್ಚದಲ್ಲಿ ಚರಂಡಿ, ಮೋರಿ, ಅಡುಗೆ ಮನೆಗಳ ನಿರ್ಮಾಣದೊಂದಿಗೆ ಶೌಚಾಲಯಗಳ ನಿರ್ಮಾಣ ಹಾಗೂ ದುರಸ್ತಿಗೆ ಜೀವಿಜಯ ಭೂಮಿಪೂಜೆ ನೆರವೇರಿಸಿದರು.
ಮಾಜಿ ಸಚಿವರ ಜತೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ್, ವಿಜಯ್, ಬಿ.ಕೆ. ದಿನೇಶ್, ರೇಣುಕ, ಮೇದಪ್ಪ, ಹೆಚ್.ಬಿ. ಜಯಮ್ಮ, ಬಸಪ್ಪ, ಬಿ.ಎಂ. ಮಹೇಶ್ ಮತ್ತಿತರ ಗ್ರಾಮ ಪ್ರಮುಖರು ಹಾಜರಿದ್ದರು.