ನಾಪೋಕ್ಲು, ಜ. 11. ನಾಪೋಕ್ಲು ಪಟ್ಟಣದ ಪ್ರವೇಶ ಮಾರ್ಗದಲ್ಲಿ ರಸ್ತೆ ತೀವ್ರ ಹದಗೆಟ್ಟಿರುವ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟವಾದ ವರದಿಗೆ ಸ್ಪಂದನ ದೊರೆತಿದೆ. ರಸ್ತೆಗೆ ಶೀಘ್ರ ಕಾಯಕಲ್ಪ ನೀಡುವದಾಗಿ ನಾಪೋಕ್ಲು ಗ್ರಾಮ ಪಂಚಾಯಿತಿ ಭರವಸೆ ನೀಡಿದೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಂಚಾಯ್ತಿ ಅಧ್ಯಕ್ಷ ಇಸ್ಮಾಯಿಲ್ ಕೆ.ಎ., ರಸ್ತೆಯ ಮರುಡಾಮರೀಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 60 ಲಕ್ಷದ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಇದೇ ತಾ. 14ಕ್ಕೆ ಟೆಂಡರ್ ತೆರೆಯಲಾಗುತ್ತದೆ ಎಂದರು. ಕೊಟ್ಟಮುಡಿ ಜಂಕ್ಷನ್ನಿಂದ ಹಳೆಯ ಅಂಚೆ ಕಚೇರಿವರೆಗಿನ ರಸ್ತೆಗೆ ಕಾಯಕಲ್ಪ ನೀಡಲಾಗುವದು. ಮಲೆನಾಡು ಅಭಿವೃದ್ಧಿ ಯೋಜನೆಯಡಿ ನಾಪೋಕ್ಲು ಗ್ರಾಮ ಪಂಚಾಯ್ತಿಗೆ 20 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಇದನ್ನು ಸೂಕ್ತವಾಗಿ ಬಳಸಿಕೊಳ್ಳಲಾಗುವದು ಎಂದು ಇಸ್ಮಾಯಿಲ್ ಹೇಳಿದರು.
ಮಳೆಗಾಲಕ್ಕೂ ಮುನ್ನ ರಸ್ತೆಗಳ ದುರಸ್ತಿ ಮತ್ತು ಡಾಮರೀಕರಣ ಕಾಮಗಾರಿ ಮುಗಿಸಲಾಗುವದು. ಈ ಬಗ್ಗೆ ಸಾರ್ವಜನಿಕರು ಪಂಚಾಯ್ತಿಯೊಂದಿಗೆ ಸಹಕಾರ ನೀಡಬೇಕೆಂದು ಇಸ್ಮಾಯಿಲ್ ಕೋರಿದರು. ಇತ್ತೀಚೆಗೆ ರಸ್ತೆ ದುರವಸ್ಥೆ ಬಗ್ಗೆ ಮಾಧ್ಯಮಗಳಲ್ಲಿ ಸಾರ್ವಜನಿಕ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರಸಾಪಿಸಿದ ಅವರು, ಗ್ರಾಮ ಪಂಚಾಯ್ತಿಯು ಜನರ ಎಲ್ಲ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಹೇಳಿದರು. ಡಾಮರೀಕರಣಕ್ಕೂ ಮುನ್ನ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿ ನಡೆಯಲಿದ್ದು, ಶನಿವಾರ ಅಥವಾ ಭಾನುವಾರ ಕಾಮಗಾರಿ ಆರಂಭಿಸುವ ಬಗ್ಗೆ ಲೋಕೋಪಯೋಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಪಂಚಾಯ್ತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಸದಸ್ಯ ಎಂ.ಪಿ.ಕುಶು ಕುಶಾಲಪ್ಪ ಉಪಸ್ಥಿತರಿದ್ದರು. -ದುಗ್ಗಳ