ಕುಶಾಲನಗರ, ಜ. 10: ಕಳೆದ 4 ತಿಂಗಳ ಹಿಂದೆ ತುಂಬಿ ಹರಿದ ಕಾವೇರಿಯಲ್ಲಿ ವರ್ಷದ ಪ್ರಾರಂಭದಲ್ಲಿಯೇ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದೆ. 2018 ರ ಆಗಸ್ಟ್ ತಿಂಗಳಲ್ಲಿ ಪ್ರವಾಹ ಭೀತಿ ಉಂಟುಮಾಡಿದ ನದಿ ಪಾತ್ರದಲ್ಲಿ ಜಲಮೂಲಗಳು ಬತ್ತಿ ಹೋಗಿದ್ದು, ಕುಶಾಲನಗರ ವ್ಯಾಪ್ತಿಯ ಕಾವೇರಿ ಸೇತುವೆ ಕೆಳಭಾಗದಲ್ಲಿ ನದಿ ತಟದ ಬಂಡೆಗಳು ಗೋಚರಿಸುತ್ತಿದ್ದು ಈ ಸಾಲಿನಲ್ಲಿ ಕಾವೇರಿ ಜಲಾನಯನ ಪ್ರದೇಶದ ಜನರು ನೀರಿನ ಕ್ಷಾಮಕ್ಕೆ ಒಳಗಾಗುವ ಸಾಧ್ಯತೆ ಅಧಿಕವಾಗಿದೆ ಎನ್ನಬಹುದು.
ಕಳೆದ ಸಾಲಿನಲ್ಲಿ ನಿರಂತರವಾಗಿ 4 ತಿಂಗಳ ಕಾಲ ಮಳೆ ಸುರಿದಿದ್ದರೂ ನದಿಯಲ್ಲಿ ನೀರು ಹರಿದು ಹೋಗಿದ್ದು ಇದೀಗ ಫೆಬ್ರವರಿ ಪ್ರಾರಂಭದಲ್ಲಿಯೇ ಪಟ್ಟಣ, ಗ್ರಾಮಗಳ ನಾಗರಿಕರು ಕುಡಿಯುವ ನೀರಿಗೆ ಹಾಹಾಕಾರ ಪಡುವ ದಿನಗಳು ಎದುರಾಗಲಿವೆ ಎನ್ನುವದು ಈ ಭಾಗದ ನಾಗರಿಕರ ಆತಂಕವಾಗಿದೆ. ಕೊಳವೆ ಬಾವಿಗಳಲ್ಲಿ ಕೂಡ ನೀರಿನ ಅಂತರ್ಜಲ ಮಟ್ಟ ಕುಸಿದಿದ್ದು ನದಿ ತಟದ ವ್ಯಾಪ್ತಿಯಲ್ಲಿ ನೀರಿನ ಕ್ಷಾಮ ಎದುರಾಗಿದೆ.
ಕಳೆದ ವರ್ಷ ಮಾರ್ಚ್ ಅಂತ್ಯದಲ್ಲಿ ನದಿ ಬತ್ತಿ ಹೋಗಿದ್ದು ಹಲವು ದಿನಗಳ ಕಾಲ ಕುಡಿಯುವ ನೀರಿಗಾಗಿ ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಜನರು ಪರದಾಡಬೇಕಾದ ದೃಶ್ಯ ಸೃಷ್ಠಿಯಾಗಿರುವದನ್ನು ಸ್ಮರಿಸಬಹುದು.