ಮಡಿಕೇರಿ, ಜ. 10: ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಇಂದಿನಿಂದಲೇ ಎರಡು ತಿಂಗಳ ರಜೆಯಲ್ಲಿ ತಮ್ಮ ತವರು ಕೇರಳಕ್ಕೆ ತೆರಳಿದ್ದಾರೆ.
ಶ್ರೀವಿದ್ಯಾ ಅವರು ತಮ್ಮ ಮಗುವಿನ ಪಾಲನೆಗಾಗಿ ಈ ರಜೆ ಪಡೆದಿದ್ದಾರೆ. ಶ್ರೀವಿದ್ಯಾ ಅವರ ತಾಯಿ ಇದುವರೆಗೆ ಮಗುವನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಕಳೆದ ಕೆಲವು ತಿಂಗಳಿನಿಂದ ಜಿಲ್ಲಾಧಿಕಾರಿಯವರ ತಂದೆ ತೀವ್ರ ಮಧುಮೇಹದ ತೊಂದರೆಗೆ ಒಳಗಾಗಿದ್ದು, ಅವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುವದರಿಂದ ಶ್ರೀವಿದ್ಯಾ ಅವರ ತಾಯಿ ಅತ್ತ ಗಮನ ಹರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಗುವನ್ನು ನೋಡಿಕೊಳ್ಳುವ ಅಗತ್ಯತೆಗಾಗಿ ರಜೆ ಮಾಡಿರುವದಾಗಿ ತಿಳಿದುಬಂದಿದೆ.
ಶುಕ್ರವಾರದಿಂದ ಜಿಲ್ಲಾ ಪ್ರವಾಸಿ ಉತ್ಸವ ಏರ್ಪಟ್ಟಿದ್ದು, ಇದೀಗ ಹಂಗಾಮಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಅವರು ಈ ಜವಾಬ್ದಾರಿಕೆ ನಿರ್ವಹಿಸುವಂತಾಗಿದೆ. ಅಲ್ಲದೆ, ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಮನೆಗಳ ನಿರ್ಮಾಣ, ಮತ್ತಿತರ ಜಿಲ್ಲೆಯ ಪ್ರಮುಖ ಯೋಜನೆಗಳ ಕುರಿತು ನೂತನ ಹಂಗಾಮಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅವರು ಹೆಚ್ಚುವರಿ ಜವಾಬ್ದಾರಿಕೆಯೊಂದಿಗೆ ಗಮನ ಹರಿಸಬೇಕಾಗಿದೆ.