ಮಡಿಕೇರಿ, ಜ. 10: ಕೊಡಗಿನ ಮಣ್ಣು ಸರಾಸರಿ 200 ರಿಂದ 250 ಇಂಚು ಮಳೆ ತಡೆದುಕೊಳ್ಳುವ ಸ್ಥಿತಿಯಲ್ಲಿದ್ದು, ಕಳೆದ ಮುಂಗಾರುವಿನಲ್ಲಿ ಕೆಲವೆಡೆ ಸರಾಸರಿ 400 ಇಂಚು ಬಿದ್ದಿರುವ ಮಳೆಯ ತೀವ್ರತೆಯಿಂದ ಅಪಾರ ಹಾನಿ ಸಂಭವಿಸಿರುವದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಮನದಾಳದ ಇಂಗಿತ ವ್ಯಕ್ತಪಡಿಸಿದರು.

ಜಿಲ್ಲೆಯ ಜೋಡುಪಾಲ, ಮದೆ, 2ನೇ ಮೊಣ್ಣಂಗೇರಿ, ಉದಯಗಿರಿ, ಮಕ್ಕಂದೂರು, ಹೆಮ್ಮೆತ್ತಾಳು ಮುಂತಾದೆಡೆ ಪ್ರಾಕೃತಿಕ ಹಾನಿಯನ್ನು ಖುದ್ದು ವೀಕ್ಷಿಸುವದರೊಂದಿಗೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಳೆಯ ತೀವ್ರತೆಯಿಂದ ಭೂಮಿಯಲ್ಲಿ ನೀರು ತೀವ್ರಗೊಂಡ ಪರಿಣಾಮ ಜಲಸ್ಫೋಟ ಸಂಭವಿಸಿದೆ ಎಂದು ವ್ಯಾಖ್ಯಾನಿಸಿದರು. ಇಂತಹ ಪ್ರಾಕೃತಿಕ ದುರಂತವನ್ನು ತಡೆಯಲು ಯಾರಿಂದಲೂ ಅಸಾಧ್ಯವೆಂದು ಅಂತರಾಳದ ನುಡಿಯಾಡಿದ ಧರ್ಮಾಧಿಕಾರಿ, ಸರಕಾರಗಳು ಮತ್ತು ಸಂಘ ಸಂಸ್ಥೆಗಳು ನೊಂದವರ ಬದುಕಿಗೆ ಅಭಯ ನೀಡಬೇಕೆಂದು ಮಾರ್ನುಡಿದರು.

ಕೊಡಗಿನಲ್ಲಿ ಧರ್ಮಸ್ಥಳ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಭಕ್ತರಿದ್ದು, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯಡಿ ಸೇವಾ ಪ್ರತಿನಿಧಿಗಳು ಸಂತ್ರಸ್ತರ ನೋವಿಗೆ ಎಲ್ಲ ರೀತಿ ಸ್ಪಂದನೆ ನೀಡಿರುವ ಮೇರೆಗೆ ತಾವು ಖುದ್ದು ಸಂತೈಸಲು ಬಂದಿರುವದಾಗಿ ಅವರು ನುಡಿದರು.

ಕೊಡಗಿನ ಜನತೆ ಸ್ವಾವಲಂಭಿಗಳಾಗಿದ್ದು, ದೇಶಕ್ಕೆ ಸೈನಿಕರ ಕೊಡುಗೆಯೊಂದಿಗೆ, ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮುಖಾಂತರ ಆರ್ಥಿಕ ಸಂಪನ್ಮೂಲ ಕೂಡ ನೀಡಿದವರಾಗಿದ್ದು, ಇಂದು ಈ ಜಿಲ್ಲೆಯ ಜನತೆ ಕಷ್ಟಕ್ಕೆ ಸಿಲುಕಿರುವ ವೇಳೆ ಎಲ್ಲರೂ ನಿರಂತರ ಸ್ಪಂದಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಧರ್ಮಾಧಿಕಾರಿಗಳ ಭೇಟಿ ಸಂದರ್ಭ ಕ್ಷೇತ್ರದ ಯೋಜನಾ ಸಮಿತಿ ಅಧ್ಯಕ್ಷ ಬಾನಂಗಡ ಅರುಣ್‍ಕುಮಾರ್, ಪ್ರತಿನಿಧಿಗಳಾದ ಡಾ. ಮಂಜುನಾಥ್, ಯತೀಶ್, ಮುಕುಂದ್, ಮಹಾವೀರ ಅರ್ಜಿ ಸಹಿತ ಇತರ ಪ್ರಮುಖರು ಆಯಾ ಕ್ಷೇತ್ರಗಳ ಜನಪ್ರತಿನಿಧಿಗಳು, ಗ್ರಾಮಸ್ಥರು ಪಾಲ್ಗೊಂಡು ಪ್ರಾಕೃತಿಕ ಹಾನಿ ಬಗ್ಗೆ ಗಮನ ಸೆಳೆದರು.