ಮಡಿಕೇರಿ, ಜ. 10: ಪ್ರಸ್ತುತ ಜೀರ್ಣೋದ್ಧಾರಗೊಳ್ಳುತ್ತಿರುವ ಮಡಿಕೇರಿ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದ ಹುಂಡಿಯನ್ನು ಒಡೆದು ನಗದು ಹಣವನ್ನು ಅಪಹರಿಸಲಾಗಿದೆ. ನಿನ್ನೆ ರಾತ್ರಿ ವೇಳೆ ಈ ಕೃತ್ಯ ನಡೆದಿದೆ. ದೇವಾಲಯ ತಡೆಗೋಡೆಗೆ ಹೊಂದಿಕೊಂಡಂತೆ ಅಳವಡಿಸಿರುವ ಹುಂಡಿಯಲ್ಲಿದ್ದ ಸುಮಾರು ಐದಾರು ಸಾವಿರ ಹಣವನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಆಶ್ಚರ್ಯವೆಂದರೆ ಹುಂಡಿಯಲ್ಲಿ ಸುಮಾರು ರೂ. 800 ಮೊತ್ತದಷ್ಟು ಹಣವನ್ನು ಉಳಿಸಿ ಹೋಗಿದ್ದಾರೆ.
ಇದೇ ಕಳ್ಳರು ದೇವಾಲಯ ಕಟ್ಟಡದಲ್ಲಿರುವ ಅಂಗಡಿ ಮಳಿಗೆಗಳ ಕಸ ಹಾಕುವಂತಹ; ಹೊರಗೆ ಇರಿಸಿದ್ದ ಪ್ಲಾಸ್ಟಿಕ್ ಬಕೆಟ್ಗಳನ್ನು ಕೂಡ ಕಳವು ಮಾಡಿರುವದು ಕಂಡುಬಂದಿದೆ. ನಗರ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ಈ ಪರಿಸರದಲ್ಲಿ ಕೆಲವೊಂದು ಗಾಂಜಾ ವ್ಯಸನಿಗಳು ನಿತ್ಯ ಅಲೆದಾಡುತ್ತಿದ್ದು, ಈ ಮಂದಿಯೇ ಹಣ ಕಳವು ಮಾಡಿರುವದಾಗಿ ದೇವಾಲಯ ಸಮಿತಿ ಪದಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ.