ಗೋಣಿಕೊಪ್ಪಲು, ಜ.10: ಕಾನೂರು ಗ್ರಾ.ಪಂ. ವ್ಯಾಪ್ತಿಯ ಕೋತೂರು ಗ್ರಾಮದ ಲಕ್ಕುಂದ ಹಾಡಿಯ ಮಲೆಯಾಳಿ ಸುರೇಂದ್ರ(45) ಎಂಬವರು ವಿಷ ಸೇವಿಸಿ ತನ್ನ ಮನೆಗೆ ಬೆಂಕಿ ಇಟ್ಟುಕೊಳ್ಳುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ವೇಳೆ ಸುರೇಂದ್ರ ವಿಷ ಸೇವಿಸಿ ತನ್ನ ಮನೆಗೆ ಬೆಂಕಿ ಇಟ್ಟುಕೊಂಡಿದ್ದಾರೆ. ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಬೆಂಕಿ ಕೆಡಿಸುವ ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ವಿಷ ಸೇವಿಸಿದ ಸುರೇಂದ್ರನನ್ನು ಕುಟ್ಟ ಆಸ್ಪತ್ರೆಗೆ ಸಾಗಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಾನಂದವಾಡಿಯ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮನೆ ಸಂಪೂರ್ಣ ಬೆಂಕಿಯಿಂದ ಹಾನಿಗೊಳಗಾಗಿದ್ದು ಮನೆಯ ಹಕ್ಕುಪತ್ರ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯದ ದಾಖಲಾತಿಗಳು ಸುಟ್ಟು ಭಸ್ಮವಾಗಿದೆ. ಗೋಣಿಕೊಪ್ಪಲುವಿನ ಅಗ್ನಿಶಾಮಕ ದಳ ಸಿಬ್ಬಂದಿಗಳು ತೆರಳಿ ಬೆಂಕಿ ನಂದಿಸಿದರು. ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುರೇಂದ್ರ ತನ್ನ ಎರಡು ಮಕ್ಕಳನ್ನು ಹಾಗೂ ಪತ್ನಿಯನ್ನು ಅಗಲಿದ್ದಾರೆ.