ಗೋಣಿಕೊಪ್ಪ ವರದಿ, ಜ. 10 : ಮಾನಸಿಕವಾಗಿ ಅಸ್ವಸ್ತಗೊಂಡು ರಸ್ತೆಬದಿಯಲ್ಲಿ ದಿನ ಕಳೆಯುತ್ತಿದ್ದ ಮಹಿಳೆಯನ್ನು ಅಂಗನವಾಡಿ ಕಾರ್ಯಕರ್ತೆ ಮುಂದಾಳತ್ವದಲ್ಲಿ ಆಸ್ಪತ್ರೆಗೆ ಸೇರಿಸಿರುವ ಘಟನೆ ನಡೆದಿದೆ.
ಮಾಯಮುಡಿ ಗ್ರಾಮದಲ್ಲಿ ಕಳೆದೆರಡು ದಿನಗಳಲ್ಲಿ ತಿರುಗಾಡುತ್ತಿದ್ದ ಸುಮಾರು 55 ವರ್ಷ ಪ್ರಾಯದ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತು. ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸುಲೋಚನ ಅವರು ಸಾರ್ವಜನಿಕರ ಸಹಕಾರದಲ್ಲಿ ಅಂಗನವಾಡಿ ಕೇಂದ್ರಕ್ಕೆ ಕರೆ ತಂದು ಊಟ ನೀಡಿ ಸಂತೈಸಿದರು. ನಂತರ ಆಂಬ್ಯುಲೆನ್ಸ್ ಮೂಲಕ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರು.
2 ದಿನಗಳ ಹಿಂದೆ ರಸ್ತೆಯಲ್ಲಿ ಸುತ್ತಾಡಿಕೊಂಡು ದಿನ ದೂಡುತ್ತಿದ್ದ ಮಹಿಳೆ ರಾತ್ರಿ ಕೂಡ ರಸ್ತೆ ಬದಿಯಲ್ಲಿ ಮಲಗುತ್ತಿದ್ದಳು. ಇದರಿಂದಾಗಿ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಮುಂದಾದರು.
ತಾ. ಪಂ. ಮಾಜಿ ಸದಸ್ಯ ಟಾಟು ಮೊಣ್ಣಪ್ಪ, ಸ್ಥಳಿಯ ಗ್ರಾಮಸ್ಥ. ಸಣ್ಣುವಂಡ ದಿಲೀಪ್ ಸೋಮಣ್ಣ ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಸಲಹೆಯಂತೆ ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಸುಲೋಚನ ಅವರ ಮಾನವೀಯತೆ ಮೆಚ್ಚುಗೆಗೆ ಪಾತ್ರವಾಯಿತು.