ಸೋಮವಾರಪೇಟೆ, ಜ. 10: ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ವತಿಯಿಂದ ಸೋಮವಾರಪೇಟೆ ಮತ್ತು ಶನಿವಾರಸಂತೆ ಹೋಬಳಿ ಜಾನಪದ ಪರಿಷತ್ ಸಹಯೋಗದೊಂದಿಗೆ ತಾ. 19 ರಂದು ಇಲ್ಲಿನ ಕೊಡವ ಸಮಾಜದಲ್ಲಿ, ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಜಾನಪದ ನೃತ್ಯ ಸ್ಪರ್ಧೆ ಆಯೋಜಿಸಲು ನಿರ್ಧರಿಸ ಲಾಯಿತು. ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಜಾನಪದ ಪರಿಷತ್‍ನ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು. ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ತಾ. 19 ರಂದು ಬೆಳಿಗ್ಗೆ 9.30ಕ್ಕೆ ಸೋಮವಾರಪೇಟೆಯ ಕೊಡವ ಸಮಾಜದಲ್ಲಿ ಸ್ಪರ್ಧೆಗೆ ಚಾಲನೆ ನೀಡಲಾಗುವದು ಎಂದು ತಾಲೂಕು ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ತಿಳಿಸಿದರು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ 1 ರಿಂದ 4, 5 ರಿಂದ 7 ಮತ್ತು 8ನೇ ತರಗತಿಯಿಂದ 10ನೇ ತರಗತಿವರೆಗೆ 3 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಂಡಗಳು ಭಾಗವಹಿಸಬಹುದಾಗಿದೆ. ಜಾನಪದ ಗೀತೆಗಳ ನೃತ್ಯಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ವಿಜೇತರಾಗುವ ತಂಡಗಳಿಗೆ ಬಹುಮಾನ ನೀಡಲಾಗುವದು. ಇದರೊಂದಿಗೆ ಪ್ರಥಮ ದ್ವಿತೀಯ, ತೃತೀಯ ಸ್ಥಾನಗಳಿಸುವ ತಂಡಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವದು ಎಂದು ಸೋಮವಾರಪೇಟೆ ಹೋಬಳಿ ಅಧ್ಯಕ್ಷ ಎಸ್.ಎ. ಮುರಳೀಧರ್ ತಿಳಿಸಿದರು.
ಆಸಕ್ತ ತಂಡಗಳು ತಾ. 15 ರೊಳಗೆ ಮೊ. 9071194087, 9900595761 ಸಂಖ್ಯೆಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿ ಕೊಳ್ಳಬೇಕು.
ಪ್ರಥಮವಾಗಿ ಹೆಸರು ನೋಂದಾಯಿಸಿ ಕೊಳ್ಳುವ 30 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವದು. ಒಂದು ವಿಭಾಗದಿಂದ ಕೇವಲ 10 ತಂಡಗಳಿಗೆ ಮಾತ್ರ ಪ್ರವೇಶ ಒದಗಿಸಲಾಗುವದು ಎಂದರು.
ಸಭೆಯಲ್ಲಿ ಪರಿಷತ್‍ನ ಉಪಾಧ್ಯಕ್ಷೆ ಸಂದ್ಯಾ ಕೃಷ್ಣಪ್ಪ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ, ಹೋಬಳಿ ಘಟಕದ ಕಾರ್ಯದರ್ಶಿ ಎಂ.ಎ. ರುಬೀನಾ, ಉಪಾಧ್ಯಕ್ಷ ನ.ಲ. ವಿಜಯ, ಶನಿವಾರಸಂತೆ ಹೋಬಳಿ ಘಟಕದ ಕಾರ್ಯದರ್ಶಿ ಮಾಲಂಬಿ ದಿನೇಶ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.