ಗೋಣಿಕೊಪ್ಪಲು, ಜ. 10: ದಕ್ಷಿಣ ಕೊಡಗಿನ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೊಕ್ಯ ಗ್ರಾಮದಲ್ಲಿ ಐತಿಹಾಸಿಕ ಶ್ರೀ ಕೃಷ್ಣ, ಬಲರಾಮನ ದೇವಸ್ಥಾನವಿದೆ. ಇಲ್ಲಿನ ದೇವಾಲಯವು ಪ್ರಪಂಚದ ಏಕೈಕ ಶ್ರೀಕೃಷ್ಣ ಬಲರಾಮನ ಸನ್ನಿದಿಯಾಗಿದೆ ಎಂದು ದೇವಾಲಯದ ಪ್ರಮುಖರು ಹೇಳುತ್ತಾರೆ.

ಇಲ್ಲಿನ ಸುಂದರ ಪರಿಸರದೊಂದಿಗೆ ದೇವಾಲಯವು ನಿರ್ಮಾಣಗೊಂಡಿದ್ದು, ಮಕ್ಕಳ ಬಾಲಗ್ರಹ ನಿವಾರಣೆಗೆ ಇಲ್ಲಿ ವಿಶೇಷವಾಗಿ ಪರಿಹಾರ ಸಿಗಲಿದೆ. ವೀರಾಜಪೇಟೆ ತಾಲೂಕಿನ ತಿತಿಮತಿ ಬಳಿಯ ನೊಕ್ಯ ಗ್ರಾಮದಲ್ಲಿ ಶ್ರೀಕೃಷ್ಣ, ಬಲರಾಮ ಒಂದೇ ಪೀಠ ಅಲಂಕರಿಸಿದ್ದು ಇದು ಪ್ರಪಂಚದ ಏಕೈಕ ಕೃಷ್ಣ, ಬಲರಾಮ ಮಂದಿರವೆನ್ನಲಾಗಿದೆ.

ಇಲ್ಲಿಗೆ ಬಾಲಗ್ರಹ ಪೀಡಿತ ಮಕ್ಕಳನ್ನು ಕರೆತಂದು ವಿಶೇಷ ಪೂಜೆ ನೆರವೇರಿಸಿದರೆ ಸಮಸ್ಯೆಗೆ ಮುಕ್ತಿ ಹಾಡ ಬಹುದು. ಚೆಪ್ಪುಡೀರ ಪೊನ್ನಪ್ಪ, ಮುದ್ದಪ್ಪ ಅವರು ನಿರ್ಮಿಸಿದ್ದ ಈ ದೇಗುಲವನ್ನು ಇಂದು ಅವರ ಮೊಮ್ಮಗ ಚೆಪ್ಪುಡೀರ ಕಾರ್ಯಪ್ಪ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಇಲ್ಲಿ ಯಾವದೇ ಪೂಜೆ ಇರಲಿ ಹಣಕ್ಕೆ ಈ ದೇಗುಲದಲ್ಲಿ ಬೇಡಿಕೆ ಇಡೋದಿಲ್ಲ ಎಂಬದು ಮತ್ತೊಂದು ವಿಶೇಷ.

ದೇವಾಲಯದ ಹಿನ್ನಲೆ: ನೊಕ್ಯ ಗ್ರಾಮದ ಚೆಪ್ಪುಡೀರ ಮುದ್ದಪ್ಪ ಅವರ ಕನಸಿನಲ್ಲಿ ಕೃಷ್ಣ ಹಾಗೂ ಬಲರಾಮ ದೇವರು ಕಾಣಿಸಿಕೊಂಡರು. ಇದರಂತೆ 1955ರಲ್ಲಿ ಈಗಿರುವ ದೇವಾಲಯದ ಬಳಿ ನಿಂತಾಗ ಮಳೆ ಹೆಚ್ಚಾಗಿತ್ತು ಆ ಸಂದರ್ಭ ಹುತ್ತದಲ್ಲಿದ್ದ ಮೂರ್ತಿ ಮುದ್ದಪ್ಪ ಅವರಿಗೆ ಕಾಣಿಸಿಕೊಂಡಿದೆ. ಕಣ್ಣಿಗೆ ಕಂಡ ಮೂರ್ತಿ ಹಾಗೂ ಕನಸಿನಲ್ಲಿ ಕಾಣಿಸಿಕೊಂಡ ಮೂರ್ತಿಗೆ ಸಾಮ್ಯತೆ ಇತ್ತು ನಂತರ ಮುದ್ದಪ್ಪ ಅವರು ಈ ಮೂರ್ತಿಯನ್ನು ಗುಡಿಸಲು ಕಟ್ಟಿ ರಕ್ಷಿಸಿದರು. ನಂತರ ಮುದ್ದಪ್ಪ ಅವರ ಪತ್ನಿ ಪೊನ್ನಪ್ಪ ಗುಡಿ ನಿರ್ಮಿಸಿದರು. ಅವರ ಕುಟುಂಬ ದೇವಾಲಯವನ್ನು ನಿರ್ವಹಿಸುತ್ತ ಬರುತ್ತಿದೆ. ನಿತ್ಯ ಬೆಳಿಗ್ಗೆ 7 ಗಂಟೆಗೆ ಹಾಗೂ ಸಂಜೆ 6ಕ್ಕೆ ಇಲ್ಲಿ ಪೂಜೆ ನೆರವೇರಿಸಲಾಗುತ್ತದೆ.

ವಾರ್ಷಿಕ ಹಿಂದೂ ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ. ಕೃಷ್ಣ ಜನ್ಮಾಷ್ಠಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜೊತೆಗೆ ಹಸು ಸಾಕುವ ಮೂಲಕ ಅದೇ ಹಾಲಿನಲ್ಲಿ ಪ್ರತಿನಿತ್ಯ ಅಭಿಷೇಕ ಕೂಡ ಮಾಡಲಾಗುತ್ತದೆ. ಉಡುಪಿಯ ಪೇಜಾವರ ಶ್ರೀಗಳು ಹೇಳುವ ಪ್ರಕಾರ ಈ ರೀತಿಯ 2 ದೇವರುಗಳ ಪೀಠ ಎಲ್ಲೂ ಇಲ್ಲ. 2015ರಲ್ಲಿ ತಿತಿಮತಿ ಭಾಗದಲ್ಲಿ ಮಳೆ ಕಡಿಮೆಗೊಂಡು ಕೃಷಿಕರು ತೊಂದರೆ ಅನುಭವಿಸಿದ್ದರು. ಈ ದೇಗುಲದಲ್ಲಿ ರೈತರು ಒಂದುಗೂಡಿ ಪೂಜೆ ಸಲ್ಲಿಸಿದ ನಂತರ ಮಳೆ ಅಧಿಕವಾಯಿತು. ಮೈಸೂರು, ತಿತಿಮತಿ ಮುಖ್ಯ ರಸ್ತೆಯ ಬಾಳೆಲೆ ಮಾರ್ಗವಾಗಿ ಕೇವಲ 5 ಕಿ.ಮೀ. ದೂರದಲ್ಲಿ ಈ ದೇವಾಸ್ಥಾನ ನೆಲೆ ನಿಂತಿದೆ.

- ಹೆಚ್.ಕೆ. ಜಗದೀಶ್