ಮಡಿಕೇರಿ, ಜ. 9: ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ನೆರವು ನೀಡುವ ಉದ್ದೇಶದಿಂದ ಬೆಂಗಳೂರಿನ ಏಳ್‍ನಾಡ್ ಕೊಡವ ಸಂಘದ ವತಿಯಿಂದ ದಾನಿಗಳಿಂದ ಸಂಗ್ರಹಿಸಿದ ದೇಣಿಗೆಯನ್ನು ಕೆಲವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಏಳ್‍ನಾಡ್ ಕೊವ ಸಂಘದ ಸ್ಥಾಪಕಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಯು.ಎಂ. ಮುದ್ದಯ್ಯ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೊಡಗಿನ ಸಂತ್ರಸ್ತರಿಗೆ ನೆರವು ನೀಡುವ ಉದ್ದೇಶದಿಂದ ಏಳ್‍ನಾಡ್ ಕೊಡವ ಸಂಘದ ಹೆಸರಿನಲ್ಲಿ ಸುಮಾರು 9.50 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದ್ದು, ಈ ಪೈಕಿ ಸುಮಾರು 6.84 ಲಕ್ಷ ರೂ.ಗಳು ಮಾತ್ರ ಸಂಘದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಉಳಿದ ಮೊತ್ತವನ್ನು ಕೆಲವು ಪದಾಧಿಕಾರಿಗಳು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಸಂಶಯವಿದೆ. ಈ ಸಂಬಂಧ ಬೆಂಗಳೂರು ನಗರ ಪಶ್ಚಿಮ ವಿಭಾಗದ ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ ಅವರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಬಗ್ಗೆ ವಿಚಾರಣೆ ನಡೆಸಿದ ಸಂದರ್ಭ ಸಂತ್ರಸ್ತರ ಹೆಸರಿನಲ್ಲಿ 9.50 ಲಕ್ಷ ರೂ. ಸಂಗ್ರಹಿಸಲಾಗಿದ್ದು, ಈ ಪೈಕಿ 6,84,740 ರೂ.ಗಳನ್ನು ಬೆಂಗಳೂರಿನ ವಸಂತನಗರದಲ್ಲಿರುವ ಸಂಘದ ಕೆನರಾ ಬ್ಯಾಂಕ್ ಉಳಿತಾಯ ಖಾತೆಗೆ ಜಮಾ ಮಾಡಲಾಗಿದೆ ಮತ್ತು ಉಳಿದ ಮೊತ್ತ ಚೆಕ್ ರೂಪದಲ್ಲಿದ್ದು, ಕ್ಲಿಯರೆನ್ಸ್‍ಗೆ ಬಾಕಿ ಇರುವದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಕ್ಲಿಯರ್ ಆಗದ ಚೆಕ್‍ಗಳು ಎಲ್ಲಿ, ಯಾರ ಬಳಿ ಇವೆ ಎಂಬ ಬಗ್ಗೆ ಸಮರ್ಪಕವಾದ ಉತ್ತರವನ್ನು ಇವರುಗಳು ನೀಡುವಲ್ಲಿ ಇವರು ವಿಫಲರಾಗಿದ್ದು, ಇದನ್ನು ಗಮನಿಸಿದಾಗ ಸಂತ್ರಸ್ತರ ಹೆಸರಿನಲ್ಲಿ ಸಂಗ್ರಹಿಸಿದ ಹಣವನ್ನು ದುರುಪಯೋಗ ಪಡಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಮುದ್ದಯ್ಯ ಆರೋಪಿಸಿದರು.

ಏಳ್‍ನಾಡ್‍ಗೆ ಸೇರಿದ ಸೂರ್ಲಬ್ಬಿ, ಕುಂಬಾರಗಡಿಗೆ, ಮಂಕ್ಯ, ಮುಟ್ಲು, ಹಮ್ಮಿಯಾಲ, ಹಚ್ಚಿನಾಡು, ಕಾಲೂರು, ಒಣಚಲು, ಹೆಬ್ಬೆಟ್ಟಗೇರಿ, ಮುಕ್ಕೋಡ್ಲು, ಮೇಘತ್ತಾಳು ಮುಂತಾದ ಅನಾಹುತ ನಡೆದಿರುವ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಕಷ್ಟ-ನಷ್ಟದ ಬಗ್ಗೆ ಮಾಹಿತಿ ಪಡೆಯದೆ ಅವರಿಗೆ ಸಂಬಂಧವಿರುವ ಮಾದಾಪುರ ಮತ್ತು ಸಮೀಪದ ಸಂಬಂಧಿಕರನ್ನು ಮಾತ್ರ ಭೇಟಿ ಮಾಡಿ ನೆಪಮಾತ್ರಕ್ಕೆ ಮಾಹಿತಿ ಪಡೆದು ಅವರಿಗೆ ಮಾತ್ರ ಹಣ ಸಹಾಯ ಮಾಡಲು ಮುಂದಾಗಿರುವದು ಸಂತ್ರಸ್ತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಟೀಕಿಸಿದರು.

ಕೊಡಗಿನ ಸಂತ್ರಸ್ತರು ಪ್ರತಿಭಟನೆ ನಡೆಸಲು ಸಜ್ಜಾಗಿರುವದರಿಂದ ಕಾರ್ಯಕ್ರಮ ನಡೆಸಿ ಹಣ ವಿತರಿಸಲು ಯಾವದೇ ಕಾರಣಕ್ಕೂ ಜಿಲ್ಲಾಡಳಿತ ಅನುಮತಿ ನೀಡಬಾರದು ಮತ್ತು ಕಾರ್ಯಕ್ರಮಕ್ಕೆ ಅನುಮತಿ ನೀಡಿದಲ್ಲಿ ಮುಂದಾಗುವ ಪ್ರತಿಭಟನೆ ಹಾಗೂ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು. ಏಳ್‍ನಾಡ್ ಕೊಡವ ಸಂಘದ ಹೆಸರಿನಲ್ಲಿ ಸಂಗ್ರಹಿಸಿರುವ ಮೊತ್ತವನ್ನು ಜಿಲ್ಲಾಡಳಿತದ ಮೂಲಕವೇ ಸಂತ್ರಸ್ತರಿಗೆ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸದಸ್ಯ ಪುಷ್ಪ ಪೂಣಚ್ಚ ಇದ್ದರು.