*ಗೋಣಿಕೊಪ್ಪಲು, ಜ. 9: ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಬಿ.ಪಿ.ಎಲ್. ಪಡಿತರಿಗೆ ನೀಡುವ ಉಚಿತ ಗ್ಯಾಸ್ ಸೌಲಭ್ಯವನ್ನು ಬಿ.ಪಿ.ಎಲ್. ಕಾರ್ಡ್ ಫಲಾನುಭಾವಿಗಳು ಪಡೆದುಕೊಳ್ಳ ಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು. ಕೇಂದ್ರ ಸರ್ಕಾರ 2019 ಜನವರಿ 1 ರಿಂದ ಬಿ.ಪಿ.ಎಲ್. ಪಡಿತ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲು ಮುಂದಾಗಿದೆ. ಗ್ಯಾಸ್ ಸಂಪರ್ಕ ಇಲ್ಲದ ಬಿ.ಪಿ.ಎಲ್. ಪಡಿತರರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿದ್ದಾರೆ.

ಫಲಾನುಭವಿಗಳು ಗ್ಯಾಸ್ ಸಂಪರ್ಕ ಹೊಂದಲು ತಮ್ಮ ಸಮೀಪದ ಅನಿಲ ವಿತರಕರಲ್ಲಿ ಮೂಲ ದಾಖಲಾತಿಗಳನ್ನು ನೀಡಿ ಫಲಾನುಭವಿಗಳು ಆಗಬಹುದು ಎಂದು ತಿಳಿಸಿದರು.

ಬಿ.ಪಿ.ಎಲ್. ಪಡಿತರ ಫಲಾಭವಿಗಳು ತಮ್ಮ ಬಿ.ಪಿ.ಎಲ್. ಕಾರ್ಡ್, ಕಾರ್ಡಿನಲ್ಲಿ ಹೆಸರಿರುವ ವ್ಯಕ್ತಿಯ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಕುಟುಂಬದ ಮಹಿಳೆಯ ಹೆಸರಿನಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಪಾಸ್ ಬುಕ್ ಜೆರಾಕ್ಸ್ ಪ್ರತಿಗಳನ್ನು ಸಮೀಪದ ಗ್ಯಾಸ್ ವಿತರಕರಲ್ಲಿ ಸಲ್ಲಿಸಿ ಫಲಾನುಭವಿ ಗಳಾಗಬಹುದು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕುಞಂಗಡ ಅರುಣ್ ಭೀಮಯ್ಯ, ಜಿಲ್ಲಾ ವರ್ತಕರ ಪ್ರಕೋಷ್ಟ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಹಿಂದುಳಿದ ವರ್ಗ ಅಧ್ಯಕ್ಷ ಚಂದ್ರಶೇಖರ್, ತಾಲೂಕು ವರ್ತಕರ ಅಧ್ಯಕ್ಷ ಚೆಪ್ಪುಡಿರ ಮಾಚಯ್ಯ, ಪೊನ್ನಂಪೇಟೆ ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು ಚಿನ್ನಪ್ಪ ಉಪಸ್ಥಿತರಿದ್ದರು.