ಸಂಪಾಜೆ, ಜ. 9: ಅರೆಭಾಷೆ ಗೌಡರ ಭಾಷೆಯಾಗಿ ಮಾತ್ರ ಇರಬಾರದು. ಜಾತಿ, ಧರ್ಮ ಮೀರಿ ಅದು ಬೆಳೆಯಬೇಕು ಎಂದು ಸಾಮಾಜಿಕ ಮುಂದಾಳು ಜಾಕೆ ಸದಾನಂದ ಗೌಡರು ಅಭಿಪ್ರಾಯ ಪಟ್ಟರು.

ಅವರು ಜಾಲ್ಸೂರಿನಲ್ಲಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಅರೆಭಾಷೆ ಸಾಂಸ್ಕøತಿಕ ಗೌಜಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಪತ್ರಕರ್ತ ಡಾ. ಯು.ಪಿ. ಶಿವಾನಂದ ಮಾತನಾಡಿ, ಜಾತಿಯ ಅಕಾಡೆಮಿ ಅಲ್ಲ. ಅರೆಭಾಷೆ ಜಾತಿ ಮತ್ತು ಧರ್ಮದ ಚೌಕಟ್ಟಿನ್ನು ಮೀರಿ ನಿಲ್ಲಬೇಕು. ಭಾಷೆ ಮತ್ತು ಸಂಸ್ಕøತಿ, ಜತೆಯಲ್ಲಿ ಜೀವನವನ್ನು ಬೆಳೆಸುವ ಮೌಲ್ಯಗಳನ್ನು ಕಲಿಸುವ ಅಗತ್ಯತೆ ಇದೆ ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ ಅಧ್ಯಕ್ಷತೆ ವಹಿಸಿದ್ದರು. ಅಕಾಡಮಿ ಸದಸ್ಯರಾದ ಮಾಧವಗೌಡ ಕಾಮಧೇನು, ಬಾರಿಯಂಡ ಜೋಯಪ್ಪ, ದಿನೇಶ್ ಹಾಲೆಮಜಲು, ಕಡ್ಲೇರ ತುಳಸಿ ಮೋಹನ್, ಕಾನೆಹಿತ್ಲ್ಲು ಮೊಣ್ಣಪ್ಪ, ಎ.ಕೆ. ಹಿಮಕರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಾನಾ ಕ್ಷೇತ್ರಗಳಲ್ಲಿನ ಸೇವೆಗಾಗಿ ಎ.ಪಿ.ಎಂ.ಸಿ. ಅಧ್ಯಕ್ಷ ಅಡ್ಡಂತಡ್ಕ ದೇರಣ್ಣಗೌಡ, ಮೋನಪ್ಪ ಗೌಡ ಕೊರಂಬಡ್ಕ, ವಿಠಲಗೌಡ ಸೋಣಂಗೇರಿ, ಮಾನಕ್ಕ, ಶ್ರೀನಿವಾಸ ಗೌಡ ಜಾಲ್ಸೂರು, ನಾರಾಯಣ ಗೌಡ ಜಬಳೆ ಅವರನ್ನು ಸನ್ಮಾನಿಸಲಾಯಿತು. ರಮ್ಯಶ್ರೀ ನಡುಮನೆ ಹಾಗೂ ನಿರ್ಮಿತಾ ಗೌಡ ಜಯನಗರ ಸನ್ಮಾನ ಪತ್ರ ವಾಚಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯ ಗ್ರಾಮಾಭಿವೃದ್ಧಿ ಜಾಲ್ಸೂರು ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಂಮನೆ ಸ್ವಾಗತಿಸಿ, ಕಾರ್ಯಕ್ರಮ ಸಂಚಾಲಕಿ ಹಾಗೂ ಅಕಾಡೆಮಿ ಸದಸ್ಯೆ ತಿರುಮಲೇಶ್ವರಿ ಅರ್ಭಡ್ಕ ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಅಕಾಡೆಮಿಯಿಂದ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಹಿರಣ್ಯಾಕ್ಷ ವಧೆ ಯಕ್ಷಗಾನ ನಡೆಯಿತು.

ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ: ಇದೇ ಸಂದರ್ಭದಲ್ಲಿ ಅರೆಭಾಷೆ ಅಕಾಡೆಮಿಯಿಂದ ಕದಿಕಡ್ಕ ಸ.ಹಿ.ಪ್ರಾ. ಶಾಲೆಯ ಗ್ರಂಥಾಲಯಕ್ಕೆ ನೀಡಿದ ಪುಸ್ತಕಗಳನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಜಯ ಗಂಗಾಧರ ಕಾಳಂಮನೆಯವರಿಗೆ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ ನೀಡಿದರು.