ಸೋಮವಾರಪೇಟೆ, ಜ. 8: ಪ್ರವಾಸಿತಾಣ ವೀಕ್ಷಣೆಗೆ ಬಂದಿದ್ದ ಮೈಸೂರಿನ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕಿರಗಂದೂರು ಗ್ರಾಮದ ಮಕ್ಕಳ ಗುಡಿ ಬೆಟ್ಟದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮೂಲತಃ ಹಾಸನ ಜಿಲ್ಲೆಯ ರಾಯಪುರ ನಿವಾಸಿ ಕೆಲವು ವರ್ಷಗಳಿಂದ ಮೈಸೂರಿನ ಎಸ್ಬಿಐ ಶಾಖೆಯೊಂದರ ಗ್ರಾಮೀಣ ಪ್ರತಿನಿಧಿಯಾಗಿರುವ ರಾಕೇಶ್ ಗೌಡ(26), ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಮುಖ, ತಲೆ, ಕೈ, ಭಾಗಕ್ಕೆ ಮಾರಣಾಂತಿಕ ಹಲ್ಲೆಯಾಗಿದೆ.
ಮಂಗಳವಾರ ಮಧ್ಯಾಹ್ನ ಕೆ.ಎ. 01-ಇವಿ 8766 ನಂಬರಿನ ಯಮಹ ಬೈಕ್ನಲ್ಲಿ ಬೆಟ್ಟಕ್ಕೆ ಆಗಮಿಸಿದ ರಾಕೇಶ್ನ ಮೇಲೆ ಯುವಕನೋರ್ವ ಹಲ್ಲೆ ನಡೆಸುತ್ತಿರುವದನ್ನು ಸ್ಥಳೀಯ ವಾಟರ್ಮನ್ ಬಾಬು ಗಮನಿಸಿ ಬೊಬ್ಬೆ ಹೊಡೆದಿದ್ದಾರೆ. ಹಲ್ಲೆಕೋರ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಬು ಹಾಗೂ ಕುಂಬೂರಿನ ಆಟೋ ಚಾಲಕ ವಿಜಯ್ ಗಾಯಾಳುವನ್ನು ಮುಖ್ಯ ರಸ್ತೆಗೆ ಸಾಗಿಸಿ, ಆ್ಯಂಬ್ಯುಲೆನ್ಸ್ ಮೂಲಕ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.
ಸೋಮವಾರಪೇಟೆ ಹಾಗೂ ಮಡಿಕೇರಿ ಠಾಣೆಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಸಂಜೆ ಭೇಟಿ ನೀಡಿ ಮಾಹಿತಿ ಕಲೆಹಾಕಿ ದ್ದಾರೆ. ಹಣ, ಚಿನ್ನ ಕಸಿದುಕೊಳ್ಳಲು ಹಲ್ಲೆ ನಡೆದಿರಬಹುದೆಂದು ಶಂಕಿಸಿ ತನಿಖೆ ಕೈಗೊಂಡಿದ್ದಾರೆ.
ಸ್ಥಳೀಯ ಯುವಕನ ವಿಚಾರಣೆ: ಕಿರಗಂದೂರು ಊರುಬೆಟ್ಟ ಗ್ರಾಮದ ಯುವಕ ಕುಮಾರಸ್ವಾಮಿ(19) ಎಂಬವರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಮಂಗಳ ವಾರ ಸಂಜೆ ಬೆಟ್ಟದ ಸಮೀಪದಲ್ಲೆ ತಿರುಗಾಡುತ್ತಿದ್ದ ಕುಮಾರಸ್ವಾಮಿಯ ಬಟ್ಟೆಯಲ್ಲಿ ರಕ್ತವನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಟ್ಟಕ್ಕೆ ತೆರಳುವ ದಾರಿಯಲ್ಲಿ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಯ ವಿವರವನ್ನು ಪೊಲೀಸರು ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.