ಗೋಣಿಕೊಪ್ಪಲು, ಜ. 8: ಪೊನ್ನಂಪೇಟೆಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಆಗ್ರಹಿಸಿ ಮೈತ್ರಿ ಸರ್ಕಾರದ ಮೇಲೆ ಒತ್ತಡ ತರಲು ಮುಂದಿನ ಅಧಿವೇಶನದೊಳಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಂದಾಯ ಸಚಿವರನ್ನು ಪಕ್ಷಾತೀತ ನಿಯೋಗದೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಗುವದು ಎಂದು ಸಭೆ ಒಮ್ಮತದ ನಿರ್ಧಾರ ಕೈಗೊಂಡಿದೆ.

ಪೊನ್ನಂಪೇಟೆ ಕೊಡವ ಸಮಾಜದ ಆವರಣದಲ್ಲಿ ನಡೆದ ತಾಲೂಕು ಹೋರಾಟ ಸಮಿತಿ ಹಾಗೂ ನಾಗರಿಕ ವೇದಿಕೆಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಪಕ್ಷಾತೀತವಾಗಿ 15 ಜನರ ತಂಡದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಮೂಲಕ ಒತ್ತಾಯ ಮಾಡೋಣ ಎಂದು ತಿಳಿಸಿದರು. ಶಾಸಕರ ಮಾತಿಗೆ ಒಪ್ಪಿಗೆ ಸೂಚಿಸಿದ ಪದಾಧಿಕಾರಿಗಳು ಶಾಸಕರ ಮುಂದಾಳತ್ವದಲ್ಲಿ ಬೆಂಗಳೂರಿಗೆ ತೆರಳಿ ತಾಲೂಕು ರಚನೆಗೆ ಮನವಿ ಮಾಡಲು ನಿರ್ಣಯ ಕೈಗೊಂಡರು.

ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ಈ ಹಿಂದೆ ಸುಧೀರ್ಘ 50 ದಿನಗಳ ಕಾಲ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಪೊನ್ನಂಪೇಟೆಯ ಗಾಂಧಿ ಪ್ರತಿಮೆಯ ಮುಂದೆ ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ. ಪೂಣಚ್ಚ ಮುಂದಾಳತ್ವದಲ್ಲಿ ಹೋರಾಟಗಳು ನಿರಂತರವಾಗಿ ನಡೆದಿದ್ದವು.

2018ರ ಜನವರಿ 9 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಡಿಕೇರಿಗೆ ಭೇಟಿ ನೀಡಿದ್ದ ವೇಳೆ ಜನಪ್ರತಿನಿಧಿಗಳ ಮೂಲಕ ಪೊನ್ನಂಪೇಟೆ ತಾಲೂಕು ಬೇಡಿಕೆಯ ಮಂಡಿಸಿ ಮನವಿ ಪತ್ರವನ್ನು ಸಹ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ್ದ ಸಿದ್ದರಾಮಯ್ಯ ನವರು ಖಂಡಿತವಾಗಿಯೂ ಪೊನ್ನಂಪೇಟೆಯನ್ನು ತಾಲೂಕು ಕೇಂದ್ರವನ್ನಾಗಿ ಮುಂದಿನ ಬಜೆಟ್ ಅಧಿವೇಶನದಲ್ಲಿ ಘೋಷಿಸುವದಾಗಿ ಭರವಸೆ ನೀಡಿದ್ದರು.

ಆಡಳಿತಾತ್ಮಕ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕುಗಳ ಪುನರ್ರಚನೆ ಅಗತ್ಯವೆಂದು ಮನಗಂಡ ಸರ್ಕಾರ 2007ರಲ್ಲಿ ಐಎಎಸ್ ಅಧಿಕಾರಿ ಎಂ.ಬಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ ತಾಲೂಕು ಪುನರ್ ರಚನಾ ಸಭೆಯನ್ನು ರಚಿಸಿ ಚಿರಂಜೀವಿ ಸಿಂಗ್ ಹಾಗೂ ಶಿವಾನಂದ್ ಇಬ್ಬರು ಐಎಎಸ್ ಅಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಿತ್ತು.

ಸಮಿತಿಯ 2008ರ ಏಪ್ರಿಲ್‍ನಲ್ಲಿ ಮಡಿಕೇರಿಗೆ ಭೇಟಿ ನೀಡಿ ಸಾರ್ವಜನಿಕರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು. ಈ ವೇಳೆ ವೀರಾಜಪೇಟೆ ತಾಲೂಕು ಅತಿ ದೊಡ್ಡ ತಾಲೂಕಾಗಿದ್ದು ಆಡಳಿತಾತ್ಮಕ ಹಿತದೃಷ್ಟಿಯಿಂದ ವಿಭಜಿಸಿ ತಾಲೂಕು ಮಟ್ಟದ ಹೆಚ್ಚಿನ ಸರ್ಕಾರಿ ಕಚೇರಿಗಳನ್ನು ಈಗಾಗಲೇ ಹೊಂದಿರುವ ಹಾಗೂ ಈ ಹಿಂದೆ ತಾಲೂಕು ಕೇಂದ್ರವಾಗಿದ್ದ ಪೊನ್ನಂಪೇಟೆಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವ ಅವಶ್ಯಕತೆಯನ್ನು ಮನದಟ್ಟು ಮಾಡಿ ಸವಿವರ ಒಳಗೊಂಡ ಮನವಿ ಪತ್ರವನ್ನು ಆಗಿನ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಅವರ ನೇತೃತ್ವದಲ್ಲಿ ಏಪ್ರಿಲ್ 16, 2018ರಂದು ತಾಲೂಕು ಪುನರ್ರಚನಾ ಸಮಿತಿಗೆ ಸಲ್ಲಿಸಲಾಗಿತ್ತು.

ಆದರೆ ತಾಲೂಕು ಪುನರ್‍ರಚನಾ ಸಮಿತಿಯ ತನ್ನ ವರದಿಯನ್ನು ವೀರಾಜಪೇಟೆಯು ಪೊನ್ನಂಪೇಟೆ ಯಿಂದ 19 ಕಿ.ಮೀ. ದೂರದಲ್ಲಿದೆ. ವೀರಾಜಪೇಟೆ ತಾಲೂಕನ್ನು ವಿಭಜಿಸುವದು ಸೂಕ್ತವಲ್ಲ ಹಾಗೇನಾದರೂ ಆದಲ್ಲಿ ವೀರಾಜಪೇಟೆ ತಾಲೂಕು ಚಿಕ್ಕದಾ ಗುತ್ತದೆ ಎಂದು ಅಭಿಪ್ರಾಯಪಟ್ಟಿತ್ತಲ್ಲದೆ ನಾಪೋಕ್ಲು ಹಾಗೂ ಕುಶಾಲನಗರ ತಾಲೂಕುಗಳ ಬೇಡಿಕೆಯನ್ನು ಸಹ ಮಾನ್ಯ ಮಾಡಲಿಲ್ಲ.

ತಾಲೂಕು ಪುನರ್ರಚನಾ ಸಮಿತಿಯ ಶಿಫಾರಸ್ಸುನ್ನು ಅಂಗೀಕರಿಸುವ, ಮಾರ್ಪಾಡು ಮಾಡುವ ಅಥವಾ ತಿರಸ್ಕರಿಸುವ ಅಧಿಕಾರ ಸರ್ಕಾರಕ್ಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವಾಸ್ತವಾಂಶ ವನ್ನು ಮತ್ತೊಮ್ಮೆ ಮನದಟ್ಟು ಮಾಡಬೇಕಾಗಿದೆ. ಅಂದರೆ ಪೊನ್ನಂಪೇಟೆಯ ವೀರಾಜಪೇಟೆ ಯಿಂದ 21 ಕಿ.ಮೀ ದೂರದಲ್ಲಿದ್ದು ಇದಕ್ಕಿಂತ ಕಡಿಮೆ ಅಂತರದಲ್ಲಿರುವ ಹಲವಾರು ತಾಲೂಕುಗಳು ನಮ್ಮ ರಾಜ್ಯದಲ್ಲಿವೆ. ಅಲ್ಲದೆ ಹೊಸದಾಗಿ ಘೋಷಿಸಿರುವ ತಾಲೂಕುಗಳು ಸಹ 10-15 ಕಿಮೀ. ಅಂತರದಲ್ಲಿದೆ. ಕೆಲವು ಹೊಸ ತಾಲೂಕುಗಳೂ ಸಹ ಅತಿ ಚಿಕ್ಕವಾಗಿದ್ದು ತಾಲೂಕು ಪುನರ್ ರಚನೆಯ ನಂತರವೂ ವೀರಾಜಪೇಟೆ ತಾಲೂಕು 621.35 ಚ.ಕಿ.ಮೀ. ವಿಸ್ತೀರ್ಣವನ್ನು ಹೊಂದಲಿದೆ ಅಲ್ಲದೆ ಪ್ರಸ್ತಾಪಿಸಿದ ಪೊನ್ನಂಪೇಟೆ ತಾಲೂಕು ಸಹ 1025 ಚ.ಕಿ.ಮೀ. ವಿಸ್ತೀರ್ಣವನ್ನು ಹೊಂದಲಿದೆ.

2009ರಲ್ಲಿ ಸಮಿತಿ 43 ಹೊಸ ತಾಲೂಕುಗಳಿಗೆ ಮಾತ್ರ ಶಿಫಾರಸ್ಸು ಮಾಡಿದ್ದರೂ ಸರ್ಕಾರ ತನ್ನದೇ ಕಾರಣಗಳಿಂದ ಹಲವಾರು ಬದಲಾವಣೆಗಳೊಂದಿಗೆ 9 ಹೊಸ ತಾಲೂಕುಗಳನ್ನು ಸೇರ್ಪಡೆ ಮಾಡಿ 50 ತಾಲೂಕು ಕೇಂದ್ರಗಳನ್ನು 2017 18ರ ಸಾಲಿನಲ್ಲಿ ಘೋಷಿಸಿತ್ತು. ಅಂತಿಮವಾಗಿ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನದಲ್ಲಿ ಪಕ್ಷ ರಹಿತ ಹೋರಾಟ ಮಾಡುವ ತೀರ್ಮಾನಕ್ಕೆ ಬಂದಿರುವ ಸಮಿತಿಯು ಸದ್ಯದಲ್ಲಿ ಬೆಂಗಳೂರಿಗೆ ತೆರಳಿ ಮನವಿ ಸಲ್ಲಿಸಲಿದೆ. ಸಭೆಯಲ್ಲಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಮಾಜಿ ಎಂಎಲ್ಸಿ ಸಿ.ಎಸ್.ಅರುಣ್ ಮಾಚಯ್ಯ, ಹೋರಾಟ ಸಮಿತಿಯ ಮುಖಂಡ ಮೂಕಳೇರ ಕುಶಾಲಪ್ಪ, ಸೇರಿದಂತೆ ಇತರ ಪದಾಧಿಕಾರಿಗಳು ಹಾಜರಿದ್ದರು.

ಸ್ನೇಹಿತನ ಹತ್ಯೆ ಯತ್ನ: ಯುವಕ ಬಂಧನ

ಸೋಮವಾರಪೇಟೆ, ಜ. 8: ಪ್ರವಾಸಿತಾಣ ವೀಕ್ಷಣೆಗೆ ಬಂದಿದ್ದ ಮೈಸೂರಿನ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕಿರಗಂದೂರು ಗ್ರಾಮದ ಮಕ್ಕಳ ಗುಡಿ ಬೆಟ್ಟದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮೂಲತಃ ಹಾಸನ ಜಿಲ್ಲೆಯ ರಾಯಪುರ ನಿವಾಸಿ ಕೆಲವು ವರ್ಷಗಳಿಂದ ಮೈಸೂರಿನ ಎಸ್‍ಬಿಐ ಶಾಖೆಯೊಂದರ ಗ್ರಾಮೀಣ ಪ್ರತಿನಿಧಿಯಾಗಿರುವ ರಾಕೇಶ್ ಗೌಡ(26), ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಮುಖ, ತಲೆ, ಕೈ, ಭಾಗಕ್ಕೆ ಮಾರಣಾಂತಿಕ ಹಲ್ಲೆಯಾಗಿದೆ.

ಮಂಗಳವಾರ ಮಧ್ಯಾಹ್ನ ಕೆ.ಎ. 01-ಇವಿ 8766 ನಂಬರಿನ ಯಮಹ ಬೈಕ್‍ನಲ್ಲಿ ಬೆಟ್ಟಕ್ಕೆ ಆಗಮಿಸಿದ ರಾಕೇಶ್‍ನ ಮೇಲೆ ಯುವಕನೋರ್ವ ಹಲ್ಲೆ ನಡೆಸುತ್ತಿರುವದನ್ನು ಸ್ಥಳೀಯ ವಾಟರ್‍ಮನ್ ಬಾಬು ಗಮನಿಸಿ ಬೊಬ್ಬೆ ಹೊಡೆದಿದ್ದಾರೆ. ಹಲ್ಲೆಕೋರ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಬು ಹಾಗೂ ಕುಂಬೂರಿನ ಆಟೋ ಚಾಲಕ ವಿಜಯ್ ಗಾಯಾಳುವನ್ನು ಮುಖ್ಯ ರಸ್ತೆಗೆ ಸಾಗಿಸಿ, ಆ್ಯಂಬ್ಯುಲೆನ್ಸ್ ಮೂಲಕ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.

ಸೋಮವಾರಪೇಟೆ ಹಾಗೂ ಮಡಿಕೇರಿ ಠಾಣೆಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಸಂಜೆ ಭೇಟಿ ನೀಡಿ ಮಾಹಿತಿ ಕಲೆಹಾಕಿ ದ್ದಾರೆ. ಹಣ, ಚಿನ್ನ ಕಸಿದುಕೊಳ್ಳಲು ಹಲ್ಲೆ ನಡೆದಿರಬಹುದೆಂದು ಶಂಕಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಯುವಕನ ವಿಚಾರಣೆ: ಕಿರಗಂದೂರು ಊರುಬೆಟ್ಟ ಗ್ರಾಮದ ಯುವಕ ಕುಮಾರಸ್ವಾಮಿ(19) ಎಂಬವರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಮಂಗಳ ವಾರ ಸಂಜೆ ಬೆಟ್ಟದ ಸಮೀಪದಲ್ಲೆ ತಿರುಗಾಡುತ್ತಿದ್ದ ಕುಮಾರಸ್ವಾಮಿಯ ಬಟ್ಟೆಯಲ್ಲಿ ರಕ್ತವನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಟ್ಟಕ್ಕೆ ತೆರಳುವ ದಾರಿಯಲ್ಲಿ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಯ ವಿವರವನ್ನು ಪೊಲೀಸರು ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.