ವೀರಾಜಪೇಟೆ, ಜ.8: ಸರಕಾರ ಗಳ ಕಾರ್ಮಿಕ ನೀತಿಯನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ವೀರಾಜಪೇಟೆಯಲ್ಲಿ ಸ್ಪಂದನ ದೊರಕಲಿಲ್ಲ.

ವೀರಾಜಪೇಟೆ ಪಟ್ಟಣದಲ್ಲಿ ಖಾಸಗಿ ಬಸ್ಸುಗಳು, ಆಟೋರಿಕ್ಷಾಗಳು, ಟ್ಯಾಕ್ಸಿಗಳು, ಇತರ ಸರುಕು ವಾಹನಗಳು, ಅಂಗಡಿ ಮುಂಗಟ್ಟು ಗಳು, ಹೊಟೇಲ್‍ಗಳು, ಶಾಲಾ ಕಾಲೇಜುಗಳು, ಎಲ್ಲ ಸರ್ಕಾರಿ ಕಚೇರಿಗಳು, ಸ್ಟೇಟ್ ಬ್ಯಾಂಕ್ ಸೇರಿದಂತೆ ಇತರ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳು ಎಂದಿನಂತೆ ಕಾರ್ಯ ನಿರ್ವಸಿದರೂ, ಗ್ರಾಹಕರು ಗಳು ವಿರಳವಾಗಿದ್ದರು. ಬಸ್ಸುಗಳು, ಎಲ್.ಐ.ಸಿ, ಅಂಚೆ ಇಲಾಖೆ, ಬಿ.ಎಸ್.ಎನ್.ಎಲ್ ಸಂಸ್ಥೆಯ ನೌಕರರು, ಕಟ್ಟಡ ಕಾರ್ಮಿಕರು ಕಾರ್ಯ ನಿರ್ವಹಿಸದೆ ಬಂದ್‍ನ್ನು ಬೆಂಬಲಿಸಿದರು.

ಸಿ.ಪಿ.ಐ, ಸಿಪಿಎಂ. ಎಲ್.ಐ.ಸಿ. ಬಿ.ಎಸ್.ಎನ್.ಎಲ್ ಸಂಸ್ಥೆ ಸೇರಿದಂತೆ ಇತರ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು, ಅಧಿಕ ಸಂಖ್ಯೆಯಲ್ಲಿ ತಾಲೂಕಿನ ಎಲ್ಲ ಕ್ಷೇತ್ರದ ಕಾರ್ಮಿಕರು ಪಟ್ಟಣದ ತೆಲುಗರಬೀದಿಯ ಮಾರಿಗುಡಿಯಿಂದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಿನಿ ವಿಧಾನಸೌಧದಲ್ಲಿ ಜಮಾವಣೆಗೊಂಡ ವಿವಿಧ ಸಂಸ್ಥೆಗಳ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ತಹಶೀಲ್ದಾರ್ ಗೋವಿಂದರಾಜು ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಹುದಿಕೇರಿ, ಸಿದ್ದಾಪುರ, ಅಮ್ಮತ್ತಿ, ಹೆಗ್ಗಳ, ತಿತಿಮತಿ, ಕಾಕೋಟುಪರಂಬು ವಿಭಾಗದ ತೋಟ ಕಾರ್ಮಿಕರು ಎಲ್.ಐ.ಸಿ ನೌಕರರು, ಬಿಎಸ್‍ಎನ್‍ಎಲ್ ಇತರ ಸಂಸ್ಥೆಗಳ ನೌಕರರು ಭಾಗವಹಿಸಿದ್ದರು. ಇದೇ ಸಂಧರ್ಭದಲ್ಲಿ ಇಲ್ಲಿನ ಮಿನಿ ವಿಧಾನ ಸೌಧದ ಮುಂದೆ ಸಿಐಟಿಯು ಜಿಲ್ಲಾಧ್ಯಕ್ಷ ಡಾ. ದುರ್ಗಾಪ್ರಸಾದ್ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಮಾತನಾಡಿದರು. ಜೆ.ಸಿ.ಟಿ.ಯುನ ಜಿಲ್ಲಾ ಕಾರ್ಯದರ್ಶಿ ಎ.ಸಿ ಸಾಬು, ತೋಟ ಕಾರ್ಮಿಕ ಸಂಘದ ಅಧ್ಯಕ್ಷ ಮಂಜು, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶಾಲಿಪೌಲೂಸ್, ಬಿಸಿಊಟ ಕಾರ್ಮಿಕರ ಸಂಘದ ಅಧ್ಯಕ್ಷೆ ಕುಸುಮ ಮತ್ತಿತರರು ಹಾಜರಿದ್ದರು. ಇಂದು ಬೆಳಗಿನಿಂದಲೇ ಪಟ್ಟಣದಾದ್ಯಂತ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.