ಮಡಿಕೇರಿ, ಜ. 8: 2ನೇ ಮೊಣ್ಣಂಗೇರಿ ಹಾಗೂ ಇತರೆಡೆಯ ಸಂತ್ರಸ್ತರಿಗೆ ಮದೆ ಗ್ರಾ.ಪಂ. ವ್ಯಾಪ್ತಿಯ ಗೋಳಿಕಟ್ಟೆ ಬಳಿ ಪುನರ್ವಸತಿ ಕಲ್ಪಿಸುವ ಕಾಮಗಾರಿ ಆರಂಭಗೊಂಡಿದೆ. ಅಲ್ಲಿನ ಸರ್ವೆ ನಂ. 399ರಲ್ಲಿ 11.28 ಎಕರೆ ಜಾಗವನ್ನು ಕಂದಾಯ ಇಲಾಖೆಯ ಸುಪರ್ದಿಗೆ ಪಡೆಯುವದರೊಂದಿಗೆ, ಸುಮಾರು 135 ಮನೆಗಳ ನಿರ್ಮಾಣಕ್ಕೆ ಕೆಲಸ ಆರಂಭಗೊಂಡಿದೆ.

ಕರ್ನಾಟಕ ರಾಜೀವ್ ಗಾಂಧಿ ಗ್ರಾಮೀಣ ಪುನರ್ವಸತಿ ನಿಗಮದಿಂದ 40ಘಿ30 ನಿವೇಶನದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ತಲಾ ಒಂದರಂತೆ ಮನೆಗೆ ಅಡಿಪಾಯ ಕೆಲಸ ಭರದಿಂದ ಸಾಗಿದೆ. ಈ ನಡುವೆ ಅಲ್ಲಿನ ನಿವಾಸಿಗಳಾದ ಕೊಲ್ಯದ ಚಂಗಪ್ಪ, ಕಾಸ್ಪಾಡಿ ರವೀಂದ್ರ ಹಾಗೂ ಮತ್ತೋರ್ವ ಹೊರ ಜಿಲ್ಲೆಯ ವ್ಯಕ್ತಿ ಖರೀದಿಸಿರುವ ಜಾಗದಲ್ಲಿ ಮೂವರಿಂದ 1.80 ಎಕರೆ ಅತಿಕ್ರಮಣ ಗೋಚರಿಸಿದೆ. ಈ ಜಾಗ ತೆರವುಗೊಳಿಸುವ ಸಂಬಂಧ ಗೊಂದಲ ಉಂಟಾಗಿದ್ದ ವಿಷಯ ತಿಳಿದು, ಇಂದು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಭೇಟಿ ನೀಡಿ ವಿವಾದ ಬಗೆಹರಿಸುವಲ್ಲಿ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿದರು. ಹತ್ತಾರು ವರ್ಷಗಳಿಂದ ಕಾಫಿ ತೋಟ ಮಾಡಿರುವ ಜಾಗಕ್ಕೆ ಪರ್ಯಾಯ ಖಾಲಿ ಜಾಗ ನೀಡಲು ಸಲಹೆ ಮಾಡಿದರು. ಈ ಸಂಬಂಧ ಕಂದಾಯ ಅಧಿಕಾರಿಗಳೊಂದಿಗೆ ಅವರು ಚರ್ಚಿಸಿದರು. ಅಲ್ಲದೆ ಪುನರ್ವಸತಿ ಯೋಜನೆಯ ಕಾಮಗಾರಿಗೆ ಗ್ರಾಮಸ್ಥರು ಸಹಕರಿಸುವಂತೆ ಸಲಹೆ ನೀಡಿದರು. ಈಗಾಗಲೇ ಮಾದಾಪುರದ ಜಂಬೂರು ಹಾಗೂ ಇತರ ಪುನರ್ವಸತಿ ಸ್ಥಳಗಳಲ್ಲಿ ಇನ್ನು ಕೆಲಸ ಪ್ರಾರಂಭಗೊಳ್ಳದಿದ್ದರೂ, ಗೋಳಿಬಾಣೆಯಲ್ಲಿ ಚಾಲನೆ ದೊರೆತಿರುವ ಬಗ್ಗೆ ಅವರು ಸಮಾಧಾನ ವ್ಯಕ್ತಪಡಿಸಿದರು. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಮಳೆಗಾಲ ಆರಂಭಗೊಳ್ಳುವ ಮುನ್ನ ಮನೆಗಳನ್ನು ಪೂರ್ಣಗೊಳಿಸುವಂತೆಯೂ ಗುತ್ತಿಗೆದಾರರಿಗೆ ಸಲಹೆ ನೀಡಿದರು. ಈ ವೇಳೆ ಕಂದಾಯ ಅಧಿಕಾರಿ ಸತೀಶ್, ಗ್ರಾ.ಪಂ. ಸದಸ್ಯರು ಹಾಗೂ ಪಿಡಿಓ ಸೇರಿದಂತೆ ಮುಖಂಡರಾದ ಹುದೇರಿ ರಾಜೇಂದ್ರ, ಕೊಲ್ಯದ ಗಿರೀಶ್, ಬೆಪ್ಪುರನ ಮೇದಪ್ಪ, ಕಿಮ್ಮುಡಿರ ಜಗದೀಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.