ಮಡಿಕೇರಿ, ಜ. 7: ಕರ್ನಾಟಕ ಸರಕಾರವು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ತೈಲಬೆಲೆ ಇಳಿಸುತ್ತಿದ್ದರೆ, ಅವೈಜ್ಞಾನಿಕವಾಗಿ ರಾಜ್ಯದಲ್ಲಿ ಶುಲ್ಕ ಏರಿಸುತ್ತಿರುವದು ಖಂಡನೀಯ ಎಂದು ಬಿಜೆಪಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಇಂದು ರಾಜ್ಯ ಸರಕಾರದ ವಿರುದ್ಧ ಘೋಷಣೆಯೊಂದಿಗೆ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು, ಮೈತ್ರಿ ಸರಕಾರವು ಜನವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಖಂಡಿಸಿದರು.
ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಈ ಸಂದರ್ಭ ಮಾತನಾಡಿ, ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರದಿಂದ ಯಾವದೇ ಜನಪರ ಕೆಲಸಗಳು ನಡೆಯದೆ, ಪರಸ್ಪರ ಕಚ್ಚಾಟದಲ್ಲಿ ಕಾಲಹರಣದಲ್ಲಿ ತೊಡಗಿದೆ ಎಂದು ಟೀಕಿಸಿದರು. ವಿಧಾನಸಭೆಯಲ್ಲಿ ಸಚಿವರೊಬ್ಬರ ಕಚೇರಿ ಸಿಬ್ಬಂದಿ ಬಳಿ ರೂ. 26 ಲಕ್ಷ ಲಂಚ ಹಣ ಬೆಳಕಿಗೆ ಬಂದರೂ, ಮುಖ್ಯಮಂತ್ರಿ ಸಹಿತ ಪ್ರಮುಖ ಸಚಿವರು ಸಮರ್ಥಿಸಿಕೊಳ್ಳುತ್ತಿರುವದು ನಾಚಿಕೆಗೇಡು ಎಂದು ಬಣ್ಣಿಸಿದರು.
ದಿನೇಶ್‍ಗೆ ತಿರುಗೇಟು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಾಜ್ಯದ ಓರ್ವ ಜನಪ್ರತಿನಿಧಿ ಹಾಗೂ ಮಾಜಿ ಮಂತ್ರಿಯಾಗಿದ್ದರೂ, ರೂ. 26 ಲಕ್ಷ ಲಂಚದ ಹಣವನ್ನು ‘ಪುಟುಗೋಸಿ’ ಎಂದು ಬಣ್ಣಿಸಿರುವ ಹಿನ್ನೆಲೆ ಗಮನಿಸಿದರೆ, ಅವರ ತಂದೆ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಮಡಿಕೇರಿ ಬ್ಯಾಂಕ್‍ನಲ್ಲಿ ಕೊಳ್ಳೆ ಹೊಡೆದಿದ್ದು, ನೆನಪಿಸಿಕೊಳ್ಳಬೇಕೆಂದು ತಿರುಗೇಟು ನೀಡಿದರು. ಹೀಗಾಗಿ ಕೆಪಿಸಿಸಿ ಅಧ್ಯಕ್ಷರು ತಂದೆಯಂತೆ ಮಗ ಎಂದು ತೋರಿಸಿಕೊಟ್ಟಂತಾಗಿದೆ ಎಂದು ಟೀಕಾ ಪ್ರಹಾರ ನಡೆಸಿದರು. ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್ ಸಹಿತ ಕೆಲವರು ರಾಜ್ಯದ ಜನಹಿತ ಕಡೆಗಣಿಸಿ, ಇಂಧನ ಬೆಲೆ ಶುಲ್ಕ ಏರಿಕೆಯಿಂದ ವಾಮವಾರ್ಗದಲ್ಲಿ ಚುನಾವಣಾ ನಿಧಿ ಸಂಗ್ರಹಿಸುವ ಹಾದಿಯಲ್ಲಿದ್ದಾರೆ ಎಂದು ಬಿಜೆಪಿ ಪ್ರಮುಖರು ಟೀಕಿಸಿದರು.
ಪ್ರತಿಭಟನೆಯಲ್ಲಿ ಪದಾಧಿಕಾರಿ ಗಳಾದ ರವಿಕುಶಾಲಪ್ಪ, ರಾಬಿನ್ ದೇವಯ್ಯ, ಬಾಲಚಂದ್ರ ಕಳಗಿ, ಶಜಿಲ್ ಕೃಷ್ಣನ್, ಯಮುನಾ ಚಂಗಪ್ಪ, ಕಾಳನ ರವಿ, ಡೀನ್ ಬೋಪಣ್ಣ, ಬೆಪ್ಪುರನ ಮೇದಪ್ಪ, ಕಾಂಗೀರ ಸತೀಶ್, ಶಿವಕುಮಾರಿ, ಅನಿತಾ ಪೂವಯ್ಯ, ಕವಿತಾ ರಾಕೆÉೀಶ್, ಕಲಾವತಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.