ಮಡಿಕೇರಿ, ಜ. 8: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಬಂದ್ ಮುಷ್ಕರಕ್ಕೆ ಬೆಂಬಲವಾಗಿ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳು ಸೇರಿದಂತೆ ಅಲ್ಲ್ಲಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದನ್ನು ಹೊರತುಪಡಿಸಿ ಬಂದ್ ಕರೆಗೆ ಕೊಡಗು ಓಗೂಡಲಿಲ್ಲ. ಶಾಲಾ-ಕಾಲೇಜುಗಳು, ಆಟೋ ಬಸ್‍ಗಳು ಎಂದಿನಂತೆ ಕಾರ್ಯಚರಿಸುವದ ರೊಂದಿಗೆ ವ್ಯಾಪಾರ ವಹಿವಾಟುಗಳು ನಡೆದವು. ಬ್ಯಾಂಕ್‍ಗಳು ತೆರೆಯಲ್ಪಟ್ಟಿದ್ದವಾದರೂ ಕೆಲವು ಬ್ಯಾಂಕ್‍ಗಳಲ್ಲಿ ಮಾತ್ರ ವ್ಯವಹಾರ ನಡೆಯಿತು.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಯಾವದೇ ರೀತಿಯಲ್ಲಿ ಬಂದ್ ಬಿಸಿ ಕಂಡು ಬರಲಿಲ್ಲ. ದೈನಂದಿನ ಚಟುವಟಿಕೆಗಳು ಎಂದಿನಂತೆ ನಡೆಯಿತು. ಸರ್ಕಾರಿ ಬಸ್, ಖಾಸಗಿ ಬಸ್, ಆಟೋರಿಕ್ಷಾ ಸಂಚಾರ ಮತ್ತು ಶಾಲಾ - ಕಾಲೇಜುಗಳು ಕಾರ್ಯಚರಿಸಿದವು. ಬಂದ್ ಕರೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಆದರೆ ಬಂದ್ ಕರೆಗೆ ಮಂಜಿನ ನಗರಿ ಬೆಂಬಲ ನೀಡಲಿಲ್ಲ. ಖಾಸಗಿ ಬಸ್‍ಗಳ ಸಂಚಾರದ ಬಗ್ಗೆ ಖಾಸಗಿ ಬಸ್ ಮಾಲೀಕರ ಸಂಘ ಪತ್ರಿಕೆಗಳ ಮೂಲಕ ಖಚಿತಪಡಿಸಿದ್ದ ಹಿನ್ನೆಲೆಯಲ್ಲಿ ಯಾವದೇ ಗೊಂದಲಗಳು ಉಂಟಾಗಲಿಲ್ಲ. ಆದರೆ ಸರ್ಕಾರಿ ಬಸ್ ಸಂಚಾರದ ಬಗ್ಗೆ ಖಚಿತ ಮಾಹಿತಿ ಇರಲಿಲ್ಲವಾದರೂ, ಸರ್ಕಾರಿ ಬಸ್‍ಗಳು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸಂಚಾರ ನಡೆಸಿದವು. ಬಸ್ - ಆಟೋ ಸಂಚಾರ ಇದ್ದ ಕಾರಣ ಶಾಲಾ - ಕಾಲೇಜುಗಳು ಕಾರ್ಯನಿರ್ವಹಿಸಿದವು.
(ಮೊದಲ ಪುಟದಿಂದ) ಗಾಂಧಿ ಪ್ರತಿಮೆ ಎದುರು ವಿವಿಧ ಕಾರ್ಮಿಕ ಸಂಘಟನೆಳಿಂದ ಪ್ರತಿಭಟನೆ ನಡೆಯಿತು. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾ ನಿರತರು ಒತ್ತಾಯಿಸಿದರು. ಸಿಐಟಿಯು, ಬಿಎಸ್‍ಎನ್‍ಎಲ್ ನೌಕರರ ಸಂಘ, ಜೀವ ವಿಮಾ ನೌಕರರ ಸಂಘ, ಆಸ್ಪತ್ರೆ ಗುತ್ತಿಗೆ ಆಧಾರದ ಕಾರ್ಮಿಕರ ಸಂಘ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘ, ಅಂಚೆ ಇಲಾಖೆ ನೌಕರರ ಸಂಘ, ತೋಟ ಕಾರ್ಮಿಕರ ಸಂಘ, ಆಶಾ ಕಾರ್ಯಕರ್ತೆಯರ ಸಂಘ, ಜಿಲ್ಲಾಸ್ಪತ್ರೆ ಸ್ವಚ್ಛ ಕಾರ್ಮಿಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದವು. ಪ್ರತಿಭಟನೆ ಮೂಲಕ ಹಕ್ಕೋತ್ತಾಯ ಮಂಡಿಸಿದವು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಟಿ.ಪಿ. ರಮೇಶ್, ಹೆಚ್.ಬಿ. ರಮೇಶ್, ಅಂತೋಣಿ, ಅನಂತೇಶ್ವರ ಸರಳಾಯ, ದಿಲ್ಶಾದ್, ನಾಗರತ್ನ, ಬೇಬಿ, ಎನ್.ಡಿ. ಕುಟ್ಟಪ್ಪ, ಪೂರ್ಣಿಮ, ಜಾನಕಿ ಮತ್ತಿತರರು ಇದ್ದರು.
ಸಿದ್ದಾಪುರ : ಸಿದ್ದಾಪುರದಲ್ಲಿ ಎಐಟಿಯುಸಿ ಕಾರ್ಮಿಕ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿತ್ತು. ಸಿದ್ದಾಪುರದ ವೀರಾಜಪೇಟೆ ರಸ್ತೆಯಿಂದ ಮಹಿಳೆಯರು ಸೇರಿದಂತೆ ಐನೂರಕ್ಕೂ ಅಧಿಕ ಕಾರ್ಮಿಕರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಗಳನ್ನು ಕೂಗುತ್ತ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಿದರು. ಬಸ್ಸ್ ನಿಲ್ದಾಣದಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಎಐಟಿಯುಸಿ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ ಸೋಮಪ್ಪ ಮಾತನಾಡಿ ಕೇಂದ್ರ ಸರಕಾರವು ರೈತರನ್ನು ಹಾಗೂ ಕಾರ್ಮಿಕರನ್ನು ಕಡೆಗಣಿಸುತ್ತಿರುವದಾಗಿ ಆರೋಪಿಸಿದರು. ಕಾರ್ಮಿಕರಿಗೆ ಕನಿಷ್ಟ ವೇತನವನ್ನು ನೀಡದೆ ವಂಚಿಸುತ್ತಿದೆ ಎಂದು ದೂರಿದರು. ಕೊಡಗು ಜಿಲ್ಲೆಯಲ್ಲಿ ಶೇ. 90 ರಷ್ಟು ಮಂದಿ ತೋಟ ಕಾರ್ಮಿಕರು ತೋಟದ ಲೈನು ಮನೆಗಳಲ್ಲಿ ವಾಸ ಮಾಡಿಕೊಂಡಿ ದ್ದಾರೆ. ಇವರುಗಳಿಗೆ ಕೂಡಲೇ ನಿವೇಶನವನ್ನು ನೀಡುವಂತೆ ಸರಕಾರವನ್ನು ಒತ್ತಾಯಿಸಿದರು. ಜಿಲ್ಲೆಯಲ್ಲಿ ಶ್ರೀಮಂತರು ಒತ್ತುವರಿ ಮಾಡಿಕೊಂಡಿರುವ ಜಾಗಗಳನ್ನು ತೆರವುಗೊಳಿಸಿ ಬಡವರಿಗೆ ನಿವೇಶನ ಒದಗಿಸಿಕೊಡುವಂತೆ ಆಗ್ರಹಿಸಿದರು.
ಎಐಟಿಯುಸಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕೆ.ವಿ ಸುನಿಲ್ ಮಾತನಾಡಿ, ದೇಶದಲ್ಲಿ 20 ಕೋಟಿ ಅಧಿಕ ಕಾರ್ಮಿಕರು ಹಲವಾರು ವರ್ಷಗಳಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಬೀದಿಗಿಳಿದು ಹೋರಾಟ ಮಾಡಿದರೂ, ಕೂಡ ಕೇಂದ್ರ ಸರಕಾರ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸದೇ ನಿರ್ಲಕ್ಷ್ಯ ದೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ರಜನಿಕಾಂತ್ ಮಾತನಾಡಿ, ಕಾರ್ಮಿಕರ ಬದುಕು ಹೀನಾಯ ಸ್ಥಿತಿಯಲ್ಲಿದ್ದರೂ, ಕೇಂದ್ರ ಸರಕಾರ ಸ್ಪಂಧಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಮಾಡುವ ಮೂಲಕ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಎಐಟಿಯುಸಿ ಕಾರ್ಮಿಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮಣಿ ಮಾರ್ಗೊಲ್ಲಿ, ಪದಾಧಿಕಾರಿಗಳಾದ ರಫೀಕ್ ನವಲುಗುಂದ, ದಾಸ, ರಮೇಶ್ ಮಾರ್ಗೊಲ್ಲಿ, ಆನಂದ, ಮಹೇಶ್, ರಮೇಶ್ ಮಾಯಮುಡಿ ಹಾಗೂ ಇತರರು ಹಾಜರಿದ್ದರು.
ನಾಪೆÇೀಕ್ಲು : ಕಾರ್ಮಿಕರ ಸಂಘಟನೆ ಕರೆದಿದ್ದ ಭಾರತ ಬಂದ್‍ಗೆ ನಾಪೆÇೀಕ್ಲುವಿನಲ್ಲಿ ಯಾವದೇ ಬೆಂಬಲ ದೊರೆಯಲಿಲ್ಲ. ಎಲ್ಲಾ ಶಾಲಾ - ಕಾಲೇಜುಗಳು ಎಂದಿನಂತೆ ತೆರೆದಿದ್ದವು. ಖಾಸಗಿ ಬಸ್‍ಗಳು, ಆಟೋರಿಕ್ಷಾಗಳ ಓಡಾಟ ಎಂದಿನಂತಿತ್ತು. ಪಟ್ಟಣದ ಅಂಗಡಿ - ಮುಂಗಟ್ಟುಗಳನ್ನು ತೆರೆಯಲಾಗಿತ್ತು. ಗಡಿಭಾಗ ಕರಿಕೆಯಲ್ಲಿಯೂ ಬಂದ್ ನಡೆಯಲಿಲ್ಲ.
ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರದೇಶಗಳಲ್ಲಿ ಯಾವದೆ ಬಂದ್ ಅಗಿಲ್ಲ.
ಅಂಚೆ ನೌಕರರ ಪ್ರತಿಭಟನೆ
ಮಡಿಕೇರಿ : ಕೇಂದ್ರ ಸರ್ಕಾರಿ ನೌಕರರ ಮತ್ತು ಕೆಲಸಗಾರರ ಸಮನ್ವಯ ಸಮಿತಿ ರಾಷ್ಟ್ರವ್ಯಾಪಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆ ಅಖಿಲ ಭಾರತ ಅಂಚೆ ಇಲಾಖಾ ನೌಕರರ ಸಂಘದ ಪೋಸ್ಟ್ ಮ್ಯಾನ್ ಮತ್ತು ಎಂಟಿಎಸ್ ಘಟಕ ನಗರದ ಮುಖ್ಯ ಅಂಚೆ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿತು.
ಸಂಘದ ಪ್ರಮುಖ ಬೇಡಿಕೆಗಳಾದ ನೂತನ ಪಿಂಚಣಿ (ಎನ್‍ಪಿಎಸ್) ಯೋಜನೆಯನ್ನು ರದ್ದುಗೊಳಿಸಬೇಕು, ಮೊದಲು ನೀಡುತ್ತಿದ್ದ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ನೂತನ ಪಿಂಚಣಿ ಯೋಜನೆಯಲ್ಲಿ ಇದೀಗ ನಿವೃತ್ತಿ ಆಗುತ್ತಿರುವ ನೌಕರರು 60 ವರ್ಷಗಳ ಕಾಲ ಇಲಾಖೆಯಲ್ಲಿ ದುಡಿದು ಕೇವಲ ರೂ. 900 ಗಳಿಂದ ರೂ. 1300 ರವರೆಗೆ ಮಾತ್ರ ಪಿಂಚಣಿ ಪಡೆಯುತ್ತಿರುವದು ವಿಷಾದಕರ ಎಂದು ಕಾರ್ಯದರ್ಶಿ ಬೇಬಿ ಜೋಸೆಫ್ ಬೇಸರ ವ್ಯಕ್ತಪಡಿಸಿದರು.
ಎರಡನೇ ದಿನವಾದ ಜ.9 ರಂದು ಕೂಡ ಪ್ರತಿಭಟನೆ ನಡೆಸುವದಾಗಿ ನೌಕರರು ತಿಳಿಸಿದರು.
ಅಧ್ಯಕ್ಷÀ ನಾಣಯ್ಯ, ಉಪಾಧ್ಯಕ್ಷÀ ಸೋಮಪ್ಪ, ಹರಿನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕುಶಾಲನಗರ : ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಕುಶಾಲನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಶಾಲನಗರ ದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ನಗದು ವ್ಯವಹಾರ ಹೊರತುಪಡಿಸಿದಂತೆ ಉಳಿದ ಎಲ್ಲಾ ವಹಿವಾಟುಗಳು ನಡೆದವು.
ಆಟೋ, ಸಾರಿಗೆ ಸಂಚಾರ, ವ್ಯಾಪಾರ ವಹಿವಾಟು, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸಮೀಪದ ಕೊಪ್ಪ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಿಗೆ ಮೈಸೂರು ಜಿಲ್ಲಾಡಳಿತ ರಜಾ ಘೋಷಣೆ ಮಾಡಿತ್ತು. ಕುಶಾಲನಗರ ವಾರದ ಸಂತೆ ಯಾವದೇ ಅಡ್ಡಿಯಿಲ್ಲದೆ ನಡೆಯಿತು.
ಸ್ಥಳೀಯ ಕೇಂದ್ರ ಸರಕಾರಿ ಕಛೇರಿಗಳಾದ ಬಿಎಸ್‍ಎನ್‍ಎಲ್, ಅಂಚೆ ಕಛೇರಿ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಸುಂಟಿಕೊಪ್ಪ : ಕಾರ್ಮಿಕರ ಸಂಘಟನೆಗಳು ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಕರೆ ನೀಡಿದ ಬಂದ್‍ಗೆ ಕಾರ್ಮಿಕರೇ ಹೆಚ್ಚಾಗಿರುವ ಸುಂಟಿಕೊಪ್ಪ ವಿಭಾಗದಲ್ಲಿ ಬೆಂಬಲ ಸಿಗಲಿಲ್ಲ.
ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಖಾಸಗಿ ಬಸ್ಸುಗಳ ಸಂಚಾರ ಎಂದಿನಂತಿತ್ತು. ರಾಷ್ಟ್ರೀಕೃತ ಬ್ಯಾಂಕುಗಳು ತೆರೆಯದೆ ಮುಷ್ಕರಕ್ಕೆ ಸಾಥ್ ನೀಡಿದವು. ಸರ್ಕಾರಿ ಬಸ್ ಸಂಚಾರ ಎಂದಿನಂತ್ತಿತ್ತು.
ಶಾಲಾ, ಕಾಲೇಜು, ನಾಡುಕಛೇರಿ, ಪಶುವೈದ್ಯಕೀಯ ಇಲಾಖೆ ಕಛೇರಿ ಎಂದಿನಂತೆ ಕರ್ತವ್ಯ ನಿರ್ವಹಿಸಿದವು. ಸಾರ್ವಜನಿಕರ ಓಡಾಟ ಕಡಿಮೆಯಿತ್ತು.
ಗೋಣಿಕೊಪ್ಪ: ಗೋಣಿಕೊಪ್ಪ ಪಟ್ಟಣ ಸೇರಿದಂತೆ ಪೊನ್ನಂಪೇಟೆ, ತಿತಿಮತಿ, ಬಾಳೆಲೆ, ಕಾನೂರು, ಪಾಲಿಬೆಟ್ಟ ಸೇರಿದಂತೆ ಸುತ್ತಮುತ್ತಲ ಪಟ್ಟಣಗಳಲ್ಲಿ ಎಂದಿನಂತೆ ವ್ಯವಹಾರ ನಡೆಯಿತು. ಸರ್ಕಾರಿ ಬಸ್ ಓಡಾಟವಿಲ್ಲದ ಕಾರಣ ಖಾಸಗಿ ಬಸ್‍ಗಳನ್ನು ಹೆಚ್ಚಿನ ಪ್ರಯಾಣಿಕರು ಅವಲಂಭಿಸಿದರು.